ಕಾಸರಗೋಡು: ಕೇರಳದ ಎಡರಂಗ ಸರ್ಕಾರ ಟ್ರೇಡ್ ಯೂನಿಯನ್ ನೋಂದಣಿ ಶುಲ್ಕವನ್ನು ಹತ್ತುಪಟ್ಟು ಹೆಚ್ಚಿಸುವ ನಿರ್ಧಾರ ಕಾರ್ಮಿಕ ವಿರೋಧಿ ಹಾಗೂ ಜನಸಾಮಾನ್ಯರನ್ನು ದಮನಿಸುವ ತಂತ್ರವಾಗಿದೆ ಎಂದು ಬಿಎಂಎಸ್ ಕಾನೂನು ರಾಜ್ಯ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್ ಆರೋಪಿಸಿದ್ದಾರೆ.
ಅವರು ನೋಂದಣಿ ಶುಲ್ಕ ಹೆಚ್ಚಳ ಖಂಡಿಸಿ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಾರ್ಮಿಕ ಕಲ್ಯಾಣ ಇಲಾಖೆ ಕಚೇರಿ ಎದುರು ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಟ್ರೇಡ್ ಯೂನಿಯನ್‍ಗಳನ್ನು ರಚಿಸಲಾಗಿದೆ. ಪ್ರಸಕ್ತ ಶುಲ್ಕ ಹೆಚ್ಚಳವು ಸಣ್ಣ ಒಕ್ಕೂಟಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಕಾರ್ಮಿಕರ ಮೇಲೆ ಭಾರಿ ಹೊರೆಯಾಗಲಿದೆ. ಅಲ್ಲದೆ ಸರ್ಕಾದ ಈ ನಿರ್ಧಾರವು ಕಾರ್ಮಿಕ ಸಂಘಗಳ ರಚನೆ ಮತ್ತು ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಇದು ಕಾರ್ಮಿಕ ವಿರೋಧಿ ಧೋರಣೆ ವಿರುದ್ಧ ಹೋರಾಡುವ ಶಕ್ತಿಯನ್ನು ದುರ್ಬಲಗೊಳಿಸಲಿದೆ. ಗೆಜೆಟೆಡ್ ಅಧಿಕಾರಿಯಿಂದ ಕಾರ್ಮಿಕರನ್ನು ಪ್ರಮಾಣೀಕರಿಸುವ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ಪ್ರಸಕ್ತ ಇರುವ ಶುಲ್ಕದೊಂದಿಗೇ ಮುಂದುವರಿಸಬೇಕು ಎಂದು ಆಘ್ರಹಿಸಿದರು.
ಬಿಎಂಎಸ್ ಜತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಎಂಎಂಎಂ ಉಪಾಧ್ಯಕ್ಷ ಅನಿಲ್ ಬಿ ನಾಯರ್, ಬಿಎಂಎಸ್ ಜಿಲ್ಲಾ ಪದಾಧಿಕಾರಿಗಳಾದ ಹರೀಶ್ ಕುದ್ರೆಪ್ಪಾಡಿ, ಯಶವಂತಿ ಬೆಜ್ಜ, ಬಾಬುಮೋನ್ ಚೆಂಗಳ, ಭಾಸ್ಕರನ್ ಪೆÇಯಿನಾಚಿ, ಶ್ರೀಧರನ್ ಚೆನಕೋಡ್ ಉಪಸ್ಥಿತರಿದ್ದರು. ಮನೀಶ್ ಸ್ವಾಗತಿಸಿದರು. ಗುರುದಾಸ್ ಮಧೂರ್ ವಂದಿಸಿದರು.ಕಾರ್ಯಖ್ರಮಕ್ಕೂ ಮೊದಲು ಕಾರ್ಮಿಕರಿಂದ ಪ್ರತಿಭಟನ ಮೆರವಣಿಗೆ ನಡೆಯಿತು. ಮಹಿಳೆಯರ ಸಹಿತ ಹಲವರು ಪಾಲ್ಗೊಂಡಿದ್ದರು.





