ಕಾಸರಗೋಡು: ಜನರಲ್ ಆಸ್ಪತ್ರೆಯ ಶೋಚನೀಯಾವಸ್ಥೆ, ಅಭಿವೃದ್ಧಿ ಶೂನ್ಯ ಹಾಗೂ ದುರಾಡಳಿತದಿಂದ ಕೂಡಿದ ನಗರಸಭೆ ವಿರುದ್ಧ ಬಿಜೆಪಿ ಕಾಸರಗೋಡು ನಗರಸಭಾ ಸಮಿತಿಯ ನೇತೃತ್ವದಲ್ಲಿ ನಗರಸಭಾ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು.
ಬಿಜೆಪಿ ರಾಜ್ಯ ಸಮಿತಿ ಕೋರ್ಡಿನೇಟರ್ ವಿ.ಕೆ. ಸಜೀವನ್ ಧರಣಿ ಉದ್ಘಾಟಿಸಿ ಮಾತನಾಡಿ, ಕೇರಳದಲ್ಲಿ ಅತಿ ಹೆಚ್ಚು ವಿಜಿಲೆನ್ಸ್ ತನಿಖೆಗಳನ್ನು ಎದುರಿಸುತ್ತಿರುವ ನಗgರಸಭೆಯಾಗಿ ಕಾಸರಗೋಡು ನಗರಸಭೆ ಮಾರ್ಪಟ್ಟಿದೆ. ನಗರಸಭೆ ಇಂದು ಭ್ರಷ್ಟಾಚಾರ, ವಿವಿಧ ಯೋಜನೆಗಳು ಮತ್ತು ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿದಂತೆ ಹಲವಾರು ತನಿಖೆಗಳನ್ನು ಎದುರಿಸುತ್ತಿರುವುದು ಇದಕ್ಕೆ ನಿದರ್ಶನವಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರುವ ಶೋಚನೀಯಾವಸ್ಥೆ ಕೇರಳದ ಮತ್ತೊಂದು ಸರ್ಕಾರಿ ಆಸ್ಪತ್ರೆಯಲ್ಲಿ ಕಂಡುಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬಿಜೆಪಿ ನಗರ ಸಮಿತಿ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಸವಿತಾ ಟೀಚರ್, ಗುರುಪ್ರಸಾದ್ ಪ್ರಭು, ಉಮಾ ಕಡಪ್ಪುರ, ಕೆ.ಜಿ. ಪವಿತ್ರ, ಹೇಮಲತಾ ಶೆಟ್ಟಿ, ರಂಜಿತಾ, ಅಶ್ವಿನಿ, ಕೆ.ಆರ್. ಹರೀಶ್, ಶಾರದ, ವಿಮಲಾ, ಶ್ರೀಲತಾ ಟೀಚರ್ ಧರಣಿ ನೇತೃತ್ವ ವಹಿಸಿದ್ದರು. ಜಿಲ್ಲಾ ಸಮಿತಿ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ ಸ್ವಾಗತಿಸಿದರು. ನಗರ ಸಮಿತಿ ಕಾರ್ಯದರ್ಶಿ ದಯಾನಂದ ಪೂಜಾರಿ ವಂದಿಸಿದರು.




