ದುಬೈ: ಯುಎಇಯ ಪ್ರತಿಷ್ಠಿತ ಗೋಲ್ಡನ್ ವೀಸಾ ಪಡೆದಿದ್ದ 18 ವರ್ಷದ ಕೇರಳ ಮೂಲದ ವಿದ್ಯಾರ್ಥಿ ವೈಷ್ಣವ್ ಕೃಷ್ಣಕುಮಾರ್ ದುಬೈನಲ್ಲಿ ದೀಪಾವಳಿ ಆಚರಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ದುಬೈ ಇಂಟರ್ ನ್ಯಾಷನಲ್ ಅಕಾಡೆಮಿಕ್ ಸಿಟಿಯಲ್ಲಿ ಮಂಗಳವಾರ ದೀಪಾವಳಿ ಆಚರಣೆ ವೇಳೆ ವೈಷ್ಣವ್ ಕೃಷ್ಣಕುಮಾರ್ ಹಠಾತ್ ಕುಸಿದು ಬಿದ್ದರು.
ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು Gulf News ವರದಿ ಮಾಡಿದೆ.
ವೈಷ್ಣವ್ ಕೃಷ್ಣಕುಮಾರ್ ದುಬೈನ ಮಿಡಲ್‌ಸೆಕ್ಸ್ ವಿಶ್ವವಿದ್ಯಾಲಯದ ಬಿಬಿಎ ಮಾರ್ಕೆಟಿಂಗ್ ವಿದ್ಯಾರ್ಥಿಯಾಗಿದ್ದರು.
ವೈಷ್ಣವ್ ಕೃಷ್ಣಕುಮಾರ್ ಗೆ ಯಾವುದೇ ಹೃದಯ ಸಂಬಂಧಿ ತೊಂದರೆ ಇರಲಿಲ್ಲ ಎಂದು ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ. ಈ ಸಂಬಂಧ ದುಬೈ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
"ವೈಷ್ಣವ್ ಕೃಷ್ಣಕುಮಾರ್ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಕೇರಳಕ್ಕೆ ಕೊಂಡೊಯ್ಯಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಶುಕ್ರವಾರದ ವೇಳೆಗೆ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹವನ್ನು ತವರಿಗೆ ಕೊಂಡೊಯ್ಯಲಾಗುತ್ತದೆʼ ಎಂದು ವೈಷ್ಣವ್ ಕೃಷ್ಣಕುಮಾರ್ ಚಿಕ್ಕಪ್ಪ ನಿತೀಶ್ ತಿಳಿಸಿದ್ದಾರೆ.




