ಕಾಸರಗೋಡು: ಐಸಿಎಆರ್- ಸಿಪಿಸಿಆರ್‍ಐ ಮತ್ತು ಕೆವಿಕೆ ಕಾಸರಗೋಡು ವತಿಯಿಂದ 'ಪ್ರಧಾನ ಮಂತ್ರಿ ಧನ್ ಧಾನ್ಯ'ಕೃಷಿ ಯೋಜನೆಯ ಉದ್ಘಾಟನಾ ಸಮಾರಂಭ ಸಿಪಿಸಿಆರ್‍ಐ ಸಭಾಂಗಣದಲ್ಲಿ ಜರುಗಿತು. ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಐಎಎಸ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಭಾರತ ಇಂದು ಧಾನ್ಯಗಳ ಉತ್ಪಾದನೆಯಲ್ಲಿ ಕ್ರಾಂತಿಕಾರಿ ಬದಲಾವಣೆಯತ್ತ ಸಾಗುತ್ತಿದ್ದು, ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬಿಯಾಗಲು ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ತಿಳಿಸಿದರು.
ದೇಶಾದ್ಯಂತ 100 ಹಿಂದುಳಿದ ಜಿಲ್ಲೆಗಳನ್ನು ಯೋಜನೆಗಾಗಿ ಆಯ್ಕೆ ಮಾಡಲಾಗಿದ್ದು, ಕೇರಳದಲ್ಲಿ ಕಾಸರಗೋಡು ಸೇರಿದಂತೆ ಮೂರು ಜಿಲ್ಲೆಗಳನ್ನು ಆಯ್ಕೆ ಮಾಡಲಗಿದೆ. ಮಹತ್ವದ ಯೋಜನೆಯನ್ನು ಕಾರ್ಯಗತಗೊಳಿಸಲು ಕೃಷಿಕರು ಕೈಜೋಡಿಸಬೇಕಾದ ಅಗತ್ಯವಿದೆ. ದ್ವಿದಳ ಧಾನ್ಯಗಳ ಬೆಳೆಯಲ್ಲಿ ಕಾಸರಗೋಡಿನ ಪರಪ್ಪ ಈಗಾಗಲೇ ಜಿಲ್ಲೆಗೆ ಮಾದರಿಯಾಗಿದೆ. ಅದೇ ಮಾದರಿಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಬೇಕಾದ ಅಗತ್ಯವಿದೆ. ಕೃಷಿ ಚಟುವಟಿಕೆಗೆ ಉಪಟಳ ತಂದೊಡ್ಡುತ್ತಿರುವ ವನ್ಯಜೀವಿಗಳನ್ನು ನಿಭಾಯಿಸಲು ಪ್ರಾಯೋಗಿಕ ವಿಧಾನವನ್ನು ಬಳಸುವ ಬಗ್ಗೆ ಜಿಲ್ಲಾಧಿಕಾರಿ ಭರವಸೆ ನೀಡಿದರು. ಐಸಿಎಆರ್ ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನ ಕೃಷಿ ವಲಯವನ್ನು ಅಭಿವೃದ್ಧಿ ಪಡಿಸಲು 6ವರ್ಷ ಕಾಲಾವಧಿಯ 42000 ಕೋಟಿ ರೂ. ಮೊತ್ತದ 1100 ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾಸರಗೋಡಿನ ಪಿಎಒ ರಾಘವೇಂದ್ರ ಅವರು ಪಿಎಂಡಿಡಿಕೆವೈ ಕಾರ್ಯಕ್ರಮದ ಹಿನ್ನೆಲೆ, ಏಕೀಕರಣ ಮತ್ತು ಯೋಜನೆಗಳು, ಹನಿ ನೀರಾವರಿ, ಬ್ಯಾಂಕ್ ಸಾಲಗಳು, ಎಂಐಡಿಎಚ್, ಇತ್ಯಾದಿ ಆದ್ಯತೆಯ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 'ಪ್ರಧಾನ ಮಂತ್ರಿ ಧನ್ ಧಾನ್ಯ' ಕೃಷಿ ಯೋಜನೆಯನ್ನು ಉದ್ಘಾಟಿಸುವ ಕಾರ್ಯಕ್ರಮದ ನೇರ ಪ್ರಸಾರ ನಡೆಸಲಾಯಿತು. 200 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು
ಕೆ. ಮಣಿಕಂಠನ್ ಅವರು ಪ್ರೇಕ್ಷಕರಿಗೆ ಕಪ್ಪುಬೇಳೆ, ಹೆಸರುಬೇಳೆ, ಗೋವಿನಜೋಳ, ಕೆಂಪುಬೇಳೆ, ಹುರುಳಿಕಾಳು ಮುಂತಾದ ದ್ವಿದಳ ಧಾನ್ಯಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. 60 ದಿನಗಳ ಕಾಲಾವಧಿಯಲ್ಲಿ ಬೆಳೆಯುವ ಅಲ್ಪಾವಧಿಯ ದ್ವಿದಳ ಧಾನ್ಯ ಬೆಳೆಗಳ ಬಗ್ಗೆ 'ಎಟಿಎಂಎ' ಕಾಸರಗೋಡಿನ ಯೋಜನಾ ನಿರ್ದೇಶಕ ಆನಂದ ವಿವರಿಸಿದರು.
ನೈಸರ್ಗಿಕ ಕೃಷಿ ಸಮುದಾಯದ ಮಾಸ್ಟರ್ ತರಬೇತುದಾರರಿಗೆ ಜಿಲ್ಲಾಧಿಕಾರಿಗಳು ಪ್ರಮಾಣಪತ್ರಗಳನ್ನು ವಿತರಿಸಿದರು.
ಕಾಸರಗೋಡಿನ ಎಸ್‍ಎಂಎಸ್ ಕೆವಿಕೆಯ ಡಾ. ಬೆಂಜಮಿನ್ ಸ್ವಾಗತಿಸಿದರು. ಡಾ. ಪೆÇನ್ನುಸ್ವಾಮಿ ವಂದಿಸಿದರು.




