ಕಾಸರಗೋಡು: ಕಳೆದ ಒಂದು ದಶಕದಲ್ಲಿ ಕೇರಳ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆ ಇತರ ರಾಜ್ಯಗಳಿಗೆ ಮಾದರಿಯಾಗಿರುವುದಾಗಿ ನೀಲೇಶ್ವರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ತಿಳಿಸಿದ್ದಾರೆ. ಅವರು ಸರ್ಕಾರಿ ಮೀನುಗಾರಿಕಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ನಡೆದ ವಲಿಯಪರಂಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಲಿಯಪರಂಬ ಪಂಚಾಯಿತಿ ಕೃಷಿಕರು ಮತ್ತು ಮೀನುಗಾರರ ಪ್ರದೇಶವಾಗಿರುವುದರಿಂದ, ಅವರ ಕಲ್ಯಾಣ ಮತ್ತು ರಕ್ಷಣೆಗಾಗಿ ಪಂಚಾಯತ್ ಜಾರಿಗೆ ತಂದಿರುವ ಯೋಜನೆಗಳು ಗಮನಾರ್ಹವಾಗಿವೆ. 2018 ಮತ್ತು 2019ರ ಪ್ರವಾಹ ಕಾಲಾವಧಿಯಲ್ಲಿ ಮತ್ತು ನಂತರದ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ರಾಜ್ಯ ಸರ್ಕಾರವು ಜನರ ಕಲ್ಯಾಣಕ್ಕಾಗಿ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿದ್ದು, ಈ ಸಂದರ್ಭ ಹಸಿರುಕ್ರಿಯಾ ಸೇನೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ವಲಿಯಪರಂಬ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ವಿ. ಸಜೀವನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅಭಿವೃದ್ಧಿ ದಾಖಲೆಯನ್ನು ಬಿಡುಗಡೆ ಮಾಡಲಾಯಿತು. ನವ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯದ ಅತ್ಯುತ್ತಮ ಪಡಿತರ ಅಂಗಡಿ ಪರವಾನಗಿದಾರರಿಗಿರುವ ಪ್ರಶಸ್ತಿ( ಪರಿಶಿಷ್ಟ ಜಾತಿ) ಯನ್ನು ಆಡಳಿತ ಮಂಡಳಿ ಸದಸ್ಯ ವಿ. ಮಧು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಖಲೀಫಾ ಉದಿನೂರ್ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಯಿತು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಖಾದರ್ ಪಾಂಡ್ಯಾಳ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಇ.ಕೆ.ಮಲ್ಲಿಕಾ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ.ಕೆ.ಮನೋಹರನ್, ಯೋಜನಾ ಸಮಿತಿ ಉಪಾಧ್ಯಕ್ಷ ವಿ.ಕೆ. ಕರುಣಾಕರನ್, ಪಂಚಾಯಿತಿ ಸದಸ್ಯರಾದ ವಿ.ಮಧು, ಕೆ.ಅಜಿತಾ, ಪಿ.ಕೆ. ಸುಮತಿ, ಸಿಡಿಎಸ್ ಅಧ್ಯಕ್ಷೆ ಇ.ಕೆ. ಬಿಂದು, ಪಂಚಾಯಿತಿ ಕಾರ್ಯದರ್ಶಿ ಕೆ.ಪ್ರದೀಪ್‍ಕುಮಾರ್ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಪಿ. ಶ್ಯಾಮಲಾ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ಸುರೇಶ್ ಅರಿಯಿಲ್ ವಂದಿಸಿದರು.





