ಕುಂಬಳೆ: ಕುಂಬಳೆ ಸನಿಹದ ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿರುವ ಪ್ಲೈವುಡ್ ಕಾರ್ಖಾನೆಯ ಬಾಯ್ಲರ್ ಸ್ಪೋಟಗೊಂಡು ಒಬ್ಬ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟ ವ್ಯಕ್ತಿ ಹಾಗೂ ಗಾಯಾಳುಗಳು ಅನ್ಯ ರಾಜ್ಯ ಕಾರ್ಮಿಕರಾಗಿದ್ದಾರೆ.
ಅನಂತಪುರ ಸರೋವರ ದೇವಾಲಯದ ಅನತಿ ದೂರದಲ್ಲಿರುವ ಕಣ್ಣೂರು ಕುನ್ನಿಲ್ ಸನಿಹ ಕಾರ್ಯಾಚರಿಸುತ್ತಿರುವ ಡೆಕ್ಕೋರ್ ಪ್ಯಾನೆಲ್ ಇಂಡಸ್ಟ್ರೀಸ್‍ನ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಸೋಮವಾರ ಸಂಜೆ 7.30ರ ವೇಳೆಗೆ ಈ ದುರಂತ ಸಂಭವಿಸಿದೆ. ಸ್ಪೋಟ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ. ಸ್ಪೋಟ ಸಂಭವಿಸುವ ಸಂದರ್ಭ 300ರಷ್ಟು ಕಾರ್ಮಿಕರು ಫ್ಯಾಕ್ಟರಿ ಆಸುಪಾಸಿನಲ್ಲಿದ್ದರೆನ್ನಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರೀ ಸ್ಪೋಟ:
ಸೋಮವಾರ ಸಂಜೆ 7.30ರ ವೇಳೆಗೆ ಭಾರೀ ಸ್ಪೋಟ ನಡೆದಿದ್ದು, ಇದರ ಶಬ್ದ ಆಸುಪಾಸಿನ ಐದಾರು ಕಿ.ಮೀ ವರೆಗೂ ಕೇಳಿಸಿರುವುದಾಗಿ ಸ್ಥಳೀಯ ನಿವಾಸಿಗಳು ತಿಳಿಸುತ್ತಾರೆ. ತಕ್ಷಣವೇ ಬೆಂಕಿಯ ಕೆನ್ನಾಲಿಗೆ ಫ್ಯಾಕ್ಟರಿಯನ್ನು ಆವರಿಸಿದೆ. ಸ್ಪೋಟದಿಂದ ಕೆಲವೊಂದು ಕಬ್ಬಿಣದ ತುಣುಕುಗಳು ಎರಡು ಕಿ.ಮೀ ದೂರದ ಮನೆಗಳ ಅಂಗಳದಲ್ಲಿ ಬಿದ್ದಿದೆ. ಅಲ್ಲದೆ ಆಸುಪಾಸಿನ ಮನೆಗಳಿಗೂ ಹಾನಿ ಸಂಭವಿಸಿದೆ. ಛಿದ್ರಗೊಂಡ ಕಲ್ಲುಗಳು ದೂರದ ಮನೆ ಅಂಗಳಕ್ಕೆ ಎಸೆಯಲ್ಪಟ್ಟಿದೆ. ಮಾಹಿತಿ ಪಡೆದ ಕುಂಬಳೆ, ಕಾಸರಗೋಡು ಸೇರಿದಂತೆ ವಿವಿಧೆಡೆಯಿಂದ ಅಗ್ನಿಶಾಮಕ ದಳದ ವಾಹನಗಳು ಹಾಗೂ ಭಾರೀ ಸಂಖ್ಯೆಯಲ್ಲಿ ಪೊಲೀಸರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನಂತಪುರ ಪ್ರದೇಶಕ್ಕೆ ವಾಹನ ಹಾಗೂ ಜನ ಸಂಚಾರವನ್ನು ಪೊಲೀಸರು ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಮತ್ತಷ್ಟು ಬಾಯ್ಲರ್ ಸಿಡಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಸುರಕ್ಷಿತವಲ್ಲ ಅನಂತಪುರ:
'ಸೇವ್ ಅನಂತಪುರ' ಎಂಬ ಘೋಷಣೆಯೊಂದಿಗೆ ಇಲ್ಲಿನ ನಾಗರಿಕರು ಹಲವು ಸಮಯದಿಂದ ಈ ಪ್ರದೇಶದಲ್ಲಿ ಧರಣಿಹೂಡುವ ಮೂಲಕ ಪವಿತ್ರ ಸರೋವರ ಕ್ಷೇತ್ರ ಸೇರಿದಂತೆ ವಿವಿಧ ಆರಾಧನಾಲಯಗಳು, ಮನೆಗಳನ್ನು ಸಂರಕ್ಷಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಾ ಬಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಅನಂತಪುರದಿಂದ ಸಾವಿರಾರು ಟನ್ನು ಲ್ಯಾಟರ್ಯಟ್ ಮಣ್ಣನ್ನು ಸಾಗಿಸುವ ಮೂಲಕ ಪ್ರಕೃತಿಯನ್ನು ನಿರಂತರ ಶೋಷಿಸಲಾಗುತ್ತಿದೆ. ಪ್ರವಾಸೋದ್ಯಮ ಕೇಂದ್ರವಾಗಬೇಕಾಗಿದ್ದ ಅನಂತಪುರದಲ್ಲಿ ಮಾರಕ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತಿರುವ ಸರ್ಕಾರದ ಕ್ರಮದ ವಿರುದ್ಧ ಪರಿಸರ ಹೋರಾಟಗಾರ, ಆರ್‍ಟಿಐ ಕಾರ್ಯಕರ್ತ ಕೇಶವ ನಾಯಕ್ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ.
ಅನಧಿಕೃತ ಜಮಾವಣೆ:
ಕೈಗಾರಿಕಾ ಕೇಂದ್ರಗಳಲ್ಲಿ ಕೆಲಸಕ್ಕಾಗಿ ರೊಹಿಂಗ್ಯಾಗಳ ಸಹಿತ ಭಾರೀ ಸಂಖ್ಯೆಯಲ್ಲಿ ಅನ್ಯರಾಜ್ಯ ಕಾರ್ಮಿಕರನ್ನು ಇಲ್ಲಿ ನಿಯೋಜಿಸಲಾಗುತ್ತಿದೆ ಎಂಬ ದುರು ವ್ಯಾಪಕಗೊಂಡಿದೆ. ಪ್ಲೈವುಡ್ ಬಾಯ್ಲರ್ ಸ್ಪೋಟ ಸಂದರ್ಭ ಕಾರ್ಕಾನೆ ಆಸುಪಾಸು 400ಕ್ಕೂ ಮಿಕ್ಕಿ ಕಾರ್ಮಿಕರಿದ್ದರೆಂಬ ಮಾಹಿತಿಯಿದ್ದು, ಇವರೆಲ್ಲರನ್ನೂ ಅನಧಿಕೃತವಾಗಿ ಇಲ್ಲಿಗೆ ಕರೆತರಲಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ನಾಡುಬೆಚ್ಚಿ ಬೀಳಿಸಿರುವ ದುರಂತದಿಂದ ಅನಂತಪುರ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.






