ಕಾಸರಗೋಡು: ಬೇಕಲ ಗೋಕುಲಂ ಗೋಶಾಲೆಯ ಸ್ಥಾಪಕ, ಜ್ಯೋತಿಷ್ಯ ಪಂಡಿತ ವಿಷ್ಣುಪ್ರಸಾದ್ ಹೆಬ್ಬಾರ್ ರಚಿಸಿದ ನವಗ್ರಹ ಕುರಿತ ಸಂಗೀತ ಕೀರ್ತನೆಗಳು ದೀಪಾವಳಿ ಸಂಗೀತೋತ್ಸವದ ಎರಡನೇ ದಿನ ಅ.21 ರಂದು ನಂದಿಮಂಟಪದಲ್ಲಿ ಬಿಡುಗಡೆಗೊಳ್ಳಲಿದೆ. ಕಾಸರಗೋಡು ಜಿಲ್ಲೆಯ ಸುಪ್ರಸಿದ್ಧ ಕರ್ನಾಟಕ ಸಂಗೀತ ತಜ್ಞ ವೆಳ್ಳಿಕೋತ್ ವಿಷ್ಣು ಭಟ್ ಈ ಕೀರ್ತನೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸಹಸ್ರಕಿರಣಂ (ಸೂರ್ಯ) ಲವಂಗಿ ರಾಗ, ಮನಸಾ ಸ್ಮರಾಮಿ ಸೋಮಂ (ಚಂದ್ರ) ಚಕ್ರವಾಕ ರಾಗ, ಮಂಗಳ ದಾಯಕಂ ಮಂಗಳರೂಪಂ (ಕುಜ) ಆನಂದ ಭೈರವಿ ರಾಗ, ಭಾವಯಾಮಿ ಸೋಮಸೂನಂ (ಬುಧ) ಧ್ಯಾನಾಸಿ ರಾಗ, ಶ್ರೀದೇವ ಗುರುಂ (ಗುರು) ಆರಭಿ ರಾಗ, ಪ್ರಣಮಾಮಿ ಶುಕ್ರಾಚಾಯಯಂ (ಶುಕ್ರ) ಹಂಸಧ್ವನಿ ರಾಗ, ಶರಣಂ ದಿವಾಕರಸುತಂ (ಶನಿ) ವಸಂತ ರಾಗ, ಛಾಯಾ ಪುತ್ರಂ ಭಜಾಮ್ಯಹಂ (ರಾಹು) ಶ್ರೀ ರಾಗ, ಕೇತುಂ ಸಂತತಮಹಂ ಚಿಂತಯೇ (ಕೇತು) ಹಂಸನಾದ ರಾಗದಲ್ಲಿ ಕೀರ್ತನೆಗಳು ಮೂಡಿಬರಲಿವೆ. ಭಜನೆಗಳೂ ಸೇರಿದಂತೆ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಗೀತ ಕೀರ್ತನೆಗಳನ್ನು ವಿಷ್ಣುಪ್ರಸಾದ್ ಹೆಬ್ಬಾರ್ ಅವರು ರಚಿಸಿದ್ದಾರೆ. ನವಗ್ರಹ ಕೀರ್ತನೆಯನ್ನು ವಿಷ್ಣು ಭಟ್ ಅವರು ಹಾಡುವಾಗ ಪಕ್ಕವಾದ್ಯದಲ್ಲಿ ವೈ.ಜಿ. ಶ್ರೀಲತಾ ನಿಕ್ಷಿತ್ (ವೀಣೆ), ಸುನಿತಾ ಹರಿಶಂಕರ್ (ವಯೋಲಿನ್), ರಾಜ್ ನಾರಾಯಣನ್ (ಮೃದಂಗ), ರೋಹಿತ್ ಪ್ರಸಾದ್ (ಘಟಂ), ಗೋಪಿ ನಾದಾಲಯ (ಮೋರ್ಸಿಂಗ್)ನಲ್ಲಿ ಜೊತೆಗೂಡಲಿದ್ದಾರೆ.


