ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್ ಅವರನ್ನು ನ್ಯಾಯಾಂಗ ನಿಂದನೆ ಆರೋಪದಡಿ ವಿಚಾರಣೆಗೆ ಗುರಿಪಡಿಸಲು ಅಟಾರ್ನಿ ಜನರಲ್ ಗುರುವಾರ ಅನುಮತಿ ನೀಡಿದ್ದಾರೆ.
ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಸುಪ್ರೀಂ ಕೋರ್ಟ್‌ನ ವಕೀಲರ ಸಂಘದ ಮುಖ್ಯಸ್ಥ ವಿಕಾಸ್ ಸಿಂಗ್ ಅವರು ಕೋರಿದರು.
ಅಕ್ಟೋಬರ್ 6ರಂದು ನಡೆದ ಘಟನೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯ ಪ್ರಕಟಣೆಗೆ ಪ್ರತಿಬಂಧಕಾಜ್ಞೆ ನೀಡುವಂತೆ ಮೆಹ್ತಾ ಮತ್ತು ಸಿಂಗ್ ಒತ್ತಾಯಿಸಿದರು.
ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವು ಇತರರ ಸಮಗ್ರತೆ ಮತ್ತು ಘನತೆಗೆ ಧಕ್ಕೆ ತರುವಂತೆ ಇರಬಾರದು ಎಂದು ಪೀಠ ಇದೇ ವೇಳೆ ತಿಳಿಸಿತು.
ನ್ಯಾಯಾಂಗ ನಿಂದನೆ ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡಲು ನಿರಾಕರಿಸಿದ ಪೀಠವು, 'ವಾರದ ಬಳಿಕ ನೋಡೊಣ' ಎಂದು ಹೇಳಿತು.

