HEALTH TIPS

ಶಬರಿಮಲೆ ಚಿನ್ನ ಕಳವು-ಬಿಜೆಪಿಯಿಂದ ನಡೆದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಯಲ್ಲಿ ಕಾರ್ಯಕರ್ತರ ಆಕ್ರೋಶ

ಕಾಸರಗೋಡು: ಶಬರಿಮಲೆಯಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಲೂಟಿ ಮತ್ತು ಚಿನ್ನದ ಕಳ್ಳತನದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು,  ಮುಜರಾಯಿ ಖಾತೆ ಸಚಿವರು ರಾಜೀನಾಮೆ ಸಲ್ಲಿಸಬೇಕು ಮತ್ತು ದೇವಸ್ವಂ ಮಂಡಳಿಯ ವಿಸರ್ಜನೆ ಸೇರಿದಂತೆ ಹಲವು ಬೇಡಿಕೆ ಮುಂದಿರಿಸಿ ಬಿಜೆಪಿ ಜಿಲ್ಲಾ ಸಮಿತಿ ಗುರುವಾರ ನಡೆಸಿದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಯಲ್ಲಿ ಕಾರ್ಯಕರ್ತರ ಆವೇಶ ಮುಗಿಲು ಮುಟ್ಟಿತ್ತು. ಭಾರೀ ಸಂಖ್ಯೆಯಲ್ಲಿ ಒಟ್ಟುಸೇರಿದ್ದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಜಿಲ್ಲಾಧಿಕಾರಿ ಕಚೇರಿ ಮುಖ್ಯ ಗೇಟಿಗೆ ಹಾಕಿದ್ದ ಬ್ಯಾರಿಕೇಡ್ ಏರಿ ಕಚೇರಿ ಆವರಣಕ್ಕೆ  ನುಗ್ಗಲು ಯತ್ನಿಸುತ್ತಿದ್ದಂತೆ ಪೊಲೀಸರು ಜಲಫಿರಂಗಿ ಹಾಯಿಸಿ ಕಾರ್ಯಕರ್ತರನ್ನು ಚದುರಿಸಲು ಯತ್ನಿಸಿದರು.

ಮಹಿಳೆಯರು ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಜಲಫಿರಂಗಿಗೂ ಜಗ್ಗದೆ, ಕಾರ್ಯಕರ್ತರು ಮುನ್ನುಗ್ಗಿದರು. 


ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಧರಣಿ ಉದ್ಘಾಟಿಸಿ ಮಾತನಾಡಿ, ಟಿಪ್ಪು ಸುಲ್ತಾನ್, ಮೊಘಲರು ದೇವಾಲಯಗಳನ್ನು ಲೂಟಿ ಮಾಡಿದ್ದ ಇತಿಹಾಸವನ್ನು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಮುಂದುವರಿಸುವ ಮೂಲಕ ಹಿಂದೂ ಸಮಾಜಕ್ಕೆ ಕಳಂಕ ತಂದೊಡ್ಡುತ್ತಿದೆ. ಭಾರತದಲ್ಲಿ ಹಿಂದೂಗಳನ್ನು ಹೊರತುಪಡಿಸಿ ಉಳಿದೆಲ್ಲ ಸಮುದಾಯದ ದೇವಾಲಯಗಳು ಮತ್ತು ಅವರ ಆಸ್ತಿಗಳನ್ನು ಆಯಾ ಧರ್ಮದ ಅನುಯಾಯಿಗಳೇ ನಿರ್ವಹಿಸುತ್ತಿದ್ದರೂ, ಕಮ್ಯೂನಿಸ್ಟರು ಸೇರಿದಂತೆ ನಾಸ್ತಿಕ ರಾಜಕಾರಣಿಗಳಿಂದ ಹಿಂದೂ ದೇವಾಲಯಗಳನ್ನು ನಿರ್ವಹಿಸುವ ಸಂಪ್ರದಾಯಕ್ಕೆ ಇತಿಶ್ರೀ ಹಾಡಬೇಕಾಗಿದೆ. 370 ನೇ ವಿಧಿಯನ್ನು ತೆಗೆದುಹಾಕಿದಂತೆ ದೇವಾಲಯಗಳ ನಿರ್ವಹಣೆ ವಿಚಾರದಲ್ಲೂ ಬಲವಾದ ಕ್ರಮ ತೆಗೆದುಕೊಳ್ಳಬೇಕು. ಪಿಣರಾಯಿ ವಿಜಯನ್ ಶಬರಿಮಲೆಯಲ್ಲಿ ಆಚರಣೆಗಳನ್ನು ಉಲ್ಲಂಘಿಸಿದ್ದು, ಇದರಿಂದ ಮೋಕ್ಷ ಪಡೆಯಲು ಜಾಗತಿಕ ಅಯ್ಯಪ್ಪ ಸಂಗಮ ನಡೆಸಿದ್ದಾರೆ. ಅಯ್ಯಪ್ಪ ದಏಗುಲದಲ್ಲಿ ಚಿನ್ನ ಕಳವು ಪ್ರಕರಣದಿಂದ ಮುಖ್ಯಮಂತ್ರಿಗೆ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಅಬ್ದುಲ್ಲಾ ಕುಟ್ಟಿ ಹೇಳಿದರು. 


ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೋಶ ಸಂಯೋಜಕ ವಕೀಲ ವಿ.ಕೆ. ಸಜೀವನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನೀಲ್, ಎನ್. ಬಾಬುರಾಜ್, ಮತ್ತು ಮನುಲಾಲ್ ಮೇಲತ್ ಉಪಸ್ಥಿತರಿದ್ದರು.  ಇದಕ್ಕೂ ಮೊದಲು ವಿದ್ಯಾನಗರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.  ಬಿಜೆಪಿ ಉಪಾಧ್ಯಕ್ಷರಾದ ಪಿ.ರಮೇಶ್, ಎಚ್.ಆರ್.ಸುಕನ್ಯಾ, ಮುರಳೀಧರ ಯಾದವ್, ಎಂ.ಭಾಸ್ಕರನ್, ಎಂ.ಬಾಲರಾಜ್, ಕಾರ್ಯದರ್ಶಿಗಳಾದ ಎನ್.ಮಧು, ಲೋಕೇಶ್ ನೋಂಡ, ಸಂಜೀವ ಪುಳಿಕೂರು, ಕೆ.ಎಂ.ಅಶ್ವಿನಿ, ಕೆ.ಟಿ. ಪುರುಷೋತ್ತಮನ್, ಪುಷ್ಪಾ ಗೋಪಾಲನ್, ಪದಾಧಿಕಾರಿಗಳಾದ  ಸುಕುಮಾರ್ ಕುದುರೆಪ್ಪಾಡಿ,  ವೀಣಾ ಅರುಣಶೆಟ್ಟಿ,   ವಿಜಯಕುಮಾರ್ ರೈ,  ಎ.ವೇಲಾಯುಧನ್, ಸವಿತಾ ಟೀಚರ್, ಸತೀಶ್ ಚಂದ್ರ ಭಂಡಾರಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕೆ.ಎಸ್. ರಮಣಿ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಸುಹೈಲ್ ಕೂಲಿಯಂಕಲ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಮೊದಲಾದವರು ನೇತೃತ್ವ ವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries