ಕಾಸರಗೋಡು: ನಗರದಲ್ಲಿ ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು, 'ಸುಂದರ ನಗರ-ಸ್ವಚ್ಛ ನಗರ'ಎಂಬ ಘೋಷಣೆಯೊಂದಿಗೆ ಕಾಸರಗೋಡು ನಗರದಲ್ಲಿ ಸಾಮೂಹಿಕ ಓಟ'ವಾಕತ್ತಾನ್' ಆಯೋಜಿಸಲಾಯಿತು.
ಕಾಸರಗೋಡು ನಗರಸಭೆಯ ಕೇರಳ ಘನತ್ಯಾಜ್ಯ ನಿರ್ವಹಣಾ ಯೋಜನೆಯ ಆಶ್ರಯದಲ್ಲಿ ವಾಕತ್ತಾನ್ ಆಯೋಜಿಸಲಾಗಿತ್ತು. ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಸಾಮೂಹಿಕ ಓಟಕ್ಕೆ ಚಾಲನೆ ನೀಡಿದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಈ ವರ್ಷದ ವಿಶ್ವ ಪರಿಸರ ದಿನದ ಸಂದೇಶವಾಗಿರುವ 'ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ' ಎಂಬ ಸಂದೇಶವಿರುವ ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಅಧ್ಯಕ್ಷ ಅಬ್ಬಾಸ್ ಬೀಗಂ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು ಶುಚಿತ್ವದ ಬಗ್ಗೆ ಪ್ರಸ್ತುತಪಡಿಸಿದ ಫ್ಲಾಶ್ ಮಾಬ್ ಗಮನಸೆಳೆಯಿತು. ಕಾಸರಗೋಡು ಸರ್ಕಾರಿ ಹೈರ್ ಸೆಕೆಂಡರಿ ಶಾಲೆ, ತಳಂಗರೆ ಜಿವಿಎಚ್‍ಎಸ್‍ಎಸ್‍ನ ಎಸ್‍ಪಿಸಿ ಸದಸ್ಯರು, ಸಾರ್ವಜನಿಕ ಪ್ರತಿನಿಧಿಗಳು, ಹಸಿರು ಕ್ರಿಯಾ ಸೇನೆ ಸದಸ್ಯರು, ವ್ಯಾಪಾರಿಗಳು ಮತ್ತು ಸಮಾಜದ ವಿವಿಧ ವರ್ಗಗಳ ಜನರು ಭಾಗವಹಿಸಿದ್ದರು.
ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸಹೀರ್‍ಆಸಿಫ್, ಕೆ.ಎಸ್. ಡಬ್ಲ್ಯೂ.ಎಂ.ಪಿ. ಜಿಲ್ಲಾ ಉಪ ಸಂಯೋಜಕ ಮಿಥುನ್ ಕೃಷ್ಣನ್, ಜಿಲ್ಲಾ ಸಾಮಾಜಿಕ ತಜ್ಞ ಡಾ. ಕೆ.ವಿ. ಸೂರಜ್, ಮೇಲ್ವಿಚಾರಣಾ ತಜ್ಞ ಸಿ.ಎಂ. ಬೈಜು, ಪ್ಯಾಕೇಜ್-ಡಿ ತಂಡದ ನಾಯಕ ಮಹೇಶ್ ರೆಡ್ಡಿ ಕೋಡೂರು, ಸಂವಹನ ಸಲಹೆಗಾರ ಟಿ.ಎಸ್. ಪರಸ್ಸಿನ್ ರಾಜ್, ಕ್ಲೀನ್ ಸಿಟಿ ವ್ಯವಸ್ಥಾಪಕ ಎ.ವಿ. ಮಧುಸೂದನನ್, ಎಸ್.ಡಬ್ಲ್ಯೂ.ಎಂ. ಇಂಜಿನಿಯರ್‍ಕೆ.ಪಿ. ನೀತುರಾಮ್ ಉಪಸ್ಥಿತರಿದ್ದರು. ನಗರಸಭಾ ಕಚೇರಿ ವಠಾರದಿಂದ ಆರಂಭಗೊಂಡ ಸಾಮೂಹಿಕ ಓಟ, ನಗರದ ವಿವಿಧೆಡೆ ಸಂಚರಿಸಿತು.




