ಕಾಸರಗೋಡು: ರಾಜ್ಯಮಟ್ಟದ ಸಾಮಾಜಿಕ ಏಕತಾ ದಿನಾಚರಣೆ ಕಾಞಂಗಾಡು ದುರ್ಗಾ ಹೈಯರ್ ಸೆಕೆಂಡರಿ ಶಾಲಾ ಆಡಿಟೋರಿಯಂನಲ್ಲಿ ಜರುಗಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು.
ಸಮಾಜದ ಎಲ್ಲಾ ಜನರನ್ನೂ ಒಟ್ಟುಗೂಡಿಸಿ ಜತೆಗೆ ಕೊಂಡೊಯ್ಯುವುದರೊಂದಿಗೆ ಶೋಷಿತ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಏಕತಾ ದಿನದ ಪ್ರಮುಖ ಉದ್ದೇಶವಾಗಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. 'ಜ್ಞಾನ ಮತ್ತು ಉದ್ಯೋಗದ ಕಡೆಗೆ ಜಿಗಿಯೋಣ'ಎಂಬುದು ಏಕತಾ ದಿನದ ಪ್ರಮುಖ ಸಂದೇಶವಾಗಿದೆ.
ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲೂ ಶಿಕ್ಷಣ ಮುಂದುವರಿಸುವ ನಿಟ್ಟಿನಲ್ಲಿ 'ಉನ್ನತಿ ವಿದ್ಯಾರ್ಥಿವೇತನ'ವನ್ನು ಜಾರಿಗೆ ತರಲಾಗಿದೆ. ಈ ರೀತಿ ವೇತನ ಪಡೆದ ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಾಗಿ ತಿಳಿಸಿದರು. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಿಂದ ಜಾರಿಗೆ ತಂದಿರುವ ಅಧ್ಯಯನ ಕೊಠಡಿ ಯೋಜನೆಯಡಿ 2025-26ನೇ ಸಾಲಿನ ಫಲಾನುಭವಿಗಳಿಗೆ ರಾಜ್ಯಮಟ್ಟದ ಆರ್ಥಿಕ ಸಹಾಯ ವಿತರಣೆಯನ್ನು ಕಾಞಂಗಾಡು ಅರೈ ಕಾರ್ತಿಕ ನಗರದ ಚಂದ್ರಜಿತ್ ಅವರಿಗೆ ಚೆಕ್ ಹಸ್ತಾಂತರಿಸುವ ಮೂಲಕ ಮುಖ್ಯಮಂತ್ರಿ ಉದ್ಘಾಟಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಓ.ಆರ್. ಕೇಳು ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಮತ್ತು ವನ್ಯಜೀವಿ ಖಾತೆ ಸಚಿವ ಎ.ಕೆ. ಶಶೀಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಎ. ಕಾಶಿಕನ್ ವರದಿ ಮಂಡಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ. ರಾಜಗೋಪಾಲನ್, ಸಿ. ಎಚ್. ಕುಂಞಂಬು, ಎನ್. ಎ. ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಞಂಗಾಡ್ ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತ, ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಡಿ. ಧರ್ಮಲಶ್ರೀ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪ್ರತೀನ್, ಕಾಞಂಗಾಡ್ ನಗರಸಭಾ ಸದಸ್ಯ ಎನ್. ಅಶೋಕ್ ಕುಮಾರ್, ರಾಜ್ಯ ಪರಿಶಿಷ್ಟ ಪಂಗಡಗಳ ಸಲಹಾ ಸಮಿತಿ ಸದಸ್ಯ ಮತ್ತು ಮಾಜಿ ಶಾಸಕ ಎಂ. ಕುಮಾರನ್, ರಾಜ್ಯ ಪರಿಶಿಷ್ಟ ಪಂಗಡಗಳ ಸಲಹಾ ಸಮಿತಿ ಸದಸ್ಯ ಎಂ.ಸಿ. ಮಾಧವನ್ ಉಪಸ್ಥಿತರಿದ್ದರು. ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಇ. ಚಂದ್ರಶೇಖರನ್ ಸ್ವಾಗತಿಸಿದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ವಂದಿಸಿದರು.





