ಕಾಸರಗೋಡು: ನವ ಕೇರಳ ಯೋಜನೆಯನ್ವಯ ಎಲ್ಲಾ ಜನರಿಗೆ ಸಾಮಾಜಿಕ ನ್ಯಾಯವನ್ನು ಆಧರಿಸಿದ ಅಭಿವೃದ್ಧಿಯನ್ನುನಾಡಿನ ಮೂಲೆಗೆ ತಲುಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಅವರು ಕೋಡೋಂ-ಬೇಲೂರು ಗ್ರಾಮ ಪಂಚಾಯಿತಿಯ ಒಡಯಂಚಾಲಿನಲ್ಲಿ ನಿರ್ಮಿಸಲಾಗಿರುವ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಯೋಜನೆಯ ಮೊದಲ ಹಂತದಲ್ಲಿ ಪೂರ್ಣಗೊಂಡ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿಕೆಲವೇ ದೇಶಗಳು ಮಾತ್ರ ಸಾಧಿಸಿರುವ ತೀವ್ರ ಬಡತನದಿಂದ ಮುಕ್ತವಾಗುವ ಗುರಿಯನ್ನು ಕೇರಳ ನವೆಂಬರ್ 1 ರಂದು ಸಾಕಾರಗೊಳಿಸಲಿದೆ. ಈ ಮೂಲಕ ಕೋಡೋಂ ಬೇಲೂರು ಗ್ರಾಮ ಪಂಚಾಯಿತಿ ಸೇರಿದಂತೆ ಕಾಸರಗೋಡು ಜಿಲ್ಲೆ ತೀವ್ರ ಬಡತನದಿಂದ ಮುಕ್ತವಾಗಿಸುವ ಗುರಿಯನ್ನು ತಲುಪಲಿರುವುದಾಗಿ ತಿಳಿಸಿದರು. ಒಡಯಂಚಾಲ್‍ನಲ್ಲಿ 43 ವ್ಯಾಪಾರಿ ಮಳಿಗೆ ಹೊಂದಿರುವ ಸುಸಜ್ಜಿತ ವಾಣಿಜ್ಯ ಸಂಕೀರ್ಣವನ್ನು 8 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಕಾಞಂಗಾಡು ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ, ಉಪಾಧ್ಯಕ್ಷ ಕೆ.ಭೂಪೇಶ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ, ಜಿಲ್ಲಾ ಪಂಚಾಯಿತಿ ಸದಸ್ಯ ಶಿನೋಜ್ ಚಾಕೊ, ಕೋಡೋಂಬೆಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ದಾಮೋದರನ್, ಪಂಚಾಯಿತಿ ಸಹಾಯಕ ನಿರ್ದೇಶಕ ಟಿ.ಟಿ.ಸುರೇಂದ್ರನ್, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಜಿನಿ ಕೃಷ್ಣನ್, ಸಮಿತಿ ಅಧ್ಯಕ್ಷರಾದ ಕೆ.ಶೈಲಜಾ, ಪಿ.ಗೋಪಾಲಕೃಷ್ಣನ್, ಎನ್.ಎಸ್. ಜಯಶ್ರೀ ಸೇರಿದಂತೆ ಜನ ಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಕೋಡೋಂಬೇಲೂರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ. ಶ್ರೀಜಾ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಎಸ್.ಜಿ. ವಿಪಿನ್ ವಂದಿಸಿದರು.





