ಕಾಸರಗೋಡು: ಜಿಲ್ಲೆಯ ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ತರಗತಿಗೆ ಚಾಲನೆ ನೀಡಿದ್ದರೂ, ಇಲ್ಲಿನ ಕಟ್ಟಡ ಕಾಮಗಾರಿ ಶೇ. 45ರಷಷ್ಟು ಇನ್ನೂ ಬಾಕಿಯಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಮಂಡಳಿಯ ಅನುಮೋದನೆ ಲಭ್ಯವಾಗುವುದರೊಂದಿಗೆ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಎಂಬಿಬಿಎಸ್ ಪ್ರವೇಶ ಆರಂಭಗೊಂಡಿದ್ದು, 40ಮಂದಿ ಈಗಾಗಲೇ ಪ್ರವೇಶ ಪಡೆದಿದ್ದಾರೆ.
ರಾಜಸ್ಥಾನದ ಗುರ್ವೀಂದರ್ ಸಿಂಗ್ ಕಾಲೇಜಿಗೆ ಪ್ರಥಮ ಎಂಟ್ರಿ ಪಡೆದಿರುವ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ. ಕಾಸರಗೋಡು ಜಿಲ್ಲೆಯಿಂದ ಏಕ ವಿದ್ಯಾರ್ಥಿನಿ, ಕಾಲೇಜಿಗೆ ಸೇರ್ಪಡೆಗೊಂಡಿದ್ದಾರೆ. ಪಾಣತ್ತೂರು ಪಂಚಾಯಿತಿಯ ಮೈಲಾಟಿ ನಿವಾಸಿ ಕೆ. ರಾಜೇಂದ್ರನ್-ಕಳ್ಳಾರ್ ಗ್ರಾಪಂ ಓವರ್‍ಸಿಯರ್ ಇ.ರಾಧಾಮಣಿ ದಂಪತಿ ಪುತ್ರಿ ಎ.ಆರ್ ಆಶಿಕಾರಾಜ್ ಜಿಲ್ಲೆಯಿಂದ ಸೇರ್ಪಡೆಗೊಂಡ ವಿದ್ಯಾರ್ಥಿನಿ.
ಕಾಲೇಜಿನಲ್ಲಿ 273 ಬೋಧಕ ಮತ್ತು ಬೋಧಕೇತರ ಹುದ್ದೆಗಳಿದೆ. ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್, ಪೆಥಾಲಜಿ, ನ್ಯೂರಾಲಜಿ, ನೆಫ್ರಾಲಜಿ, ಕಮ್ಯುನಿಟಿ ಮೆಡಿಸಿನ್, ಡರ್ಮಟಾಲಜಿ, ಇಎನ್‍ಟಿ, ರೆಸ್ಪಿರೇಟರಿ ವೈದ್ಯಕೀಯ ಸೇರಿದಂತೆ ವಿವಿಧ ವಿಭಾಗಗಳನ್ನು ಆರಂಭಿಸಲಾಗಿದೆ. ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆಯೂ ಆರಂಭಗೊಳ್ಳಲಿದ್ದು, ಈಗಾಗಲೇ ಪ್ರಾಂಶುಪಾಲರ ನೇಮಕಾತಿಯೂ ನಡೆದಿದೆ.
2013ರಲ್ಲಿ ಅಂದಿನ ಊಮನ್‍ಚಾಂಡಿ ನೇತೃತ್ವದ ಐಕ್ಯರಂಗ ಸರ್ಕಾರ ಕಾಲಾವಧಿಯಲ್ಲಿ ಶಿಲಾನ್ಯಾಸ ನಡೆಸಲಾಗಿದ್ದು, ಮೂರು ವರ್ಷದಲ್ಲಿ ಪೂರ್ತಿಗೊಳ್ಳಬೇಕಾಗಿದ್ದ ಕಾಮಗಾರಿ, 13ವರ್ಷಗಳ ನಂತರ ಅಪೂರ್ಣ ಕಟ್ಟಡದಲ್ಲಿ ಎಂಬಿಬಿಎಸ್‍ಗೆ ಪ್ರವೇಶಾತಿ ಆರಂಭಿಸಲಾಗಿದೆ. ಕಾಮಗಾರಿ ಪೂರ್ತಿಗೊಳ್ಳದಿರುವ ಬಗ್ಗೆ ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಹಾಗೂ ಚಿಕಿತ್ಸೆಗಾಗಿ ಇತರ ರಾಜ್ಯಗಳನ್ನು ಆಶ್ರಯಿಸುತ್ತಿರುವ ರೋಗಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅಭಿಮತ:
ಅರ್ಧಕ್ಕೆ ಸ್ಥಗಿತಗೊಂಡಿರುವ ಕಟ್ಟಡ ಕಾಮಗಾರಿ ಶೀಘ್ರ ಪುನರಾರಂಭಗೊಳ್ಳಲಿದೆ. 60 ಸೀಟುಗಳೊಂದಿಗೆ ನಸಿರ್ಂಗ್ ಕಾಲೇಜನ್ನು ಪ್ರಾರಂಭಿಸಲಾಗಿದ್ದು, 29 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹಾಸ್ಟೆಲ್ ನಿರ್ಮಾಣ ಅಂತಿಮಹಂತದಲ್ಲಿದೆ. ಎರಡನೇ ಹಂತದಲ್ಲಿ ಉಳಿದ ಸೀಟುಗಳನ್ನು ಭರ್ತಿಮಾಡಲಾಗುವುದು.
ಆರ್. ಪ್ರವೀಣ್, ಅಧೀಕ್ಷಕರು
ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ






