ಕಾಸರಗೋಡು: ಹೈನುಗಾರಿಕೆ ಕ್ಷೇತ್ರದಲ್ಲಿ ಸ್ವಾವಲಂಬನೆಯ ಗುರಿಯೊಂದಿಗೆ ನೀಲೇಶ್ವರಂ ಬ್ಲಾಕ್ ಪಂಚಾಯಿತಿ ವಿವಿಧ ಅಭಿವೃದ್ಧಿ ಯೋಜನೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಹಾಲಿನ ಉತ್ಪಾದಕತೆ ಗಣನೀಯವಾಗಿ ಹೆಚ್ಚಾಗಿದೆ. ಹಾಲು ಉತ್ಪಾದನೆ ಹೆಚ್ಚಿಸಲು, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಲಾಕ್ ಪಂಚಾಯಿತಿ 2.2 ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯಗತಗೊಳಿಸಿ ಈ ಯಶಸ್ಸು ಸಾಧಿಸಿದೆ.
ಹಾಲಿನ ಬೆಲೆ ಮೇಲೆ ಸಬ್ಸಿಡಿ, ಬ್ಲಾಕ್ ಪಂಚಾಯಿತಿ ರೈತರಿಗೆ ಮೇವು ಮತ್ತು ಬಡ್ಡಿರಹಿತ ಸಾಲಗಳ ರೂಪದಲ್ಲಿ ಬೆಂಬಲ ಹೈನುಗಾರಿಗೆ ಆಶ್ರಯವಾಗಿ ಕಾರ್ಯವೆಸಗುವ ಮೂಲಕ ನೀಲೇಶ್ವರಂ ಡೇರಿ ವಲಯವು ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ.
ಮುಂಚೂಣಿಯಲ್ಲಿ ನೀಲೇಶ್ವರ:
ಆಧುನಿಕತೆಯ ಹೊಸ ಯುಗದಲ್ಲಿ, ನೀಲೇಶ್ವರ ಬ್ಲಾಕ್‍ನಲ್ಲಿ ಹಾಲು ಉತ್ಪಾದನೆಯಲ್ಲೂ ಹೊಸತನ ಕಂಡುಕೊಂಡಿದೆ. ಹಾಲು ಉತ್ಪಾದನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ರೈತರ ಕೆಲಸದ ಹೊರೆ ಕಡಿಮೆ ಮಾಡುವ ಮತ್ತು ಶುದ್ಧ ಹಾಲು ಉತ್ಪಾದಿಸುವತ್ತ ಆದ್ಯತೆ ನೀಡುವ ಮೂಲಕ, ಬ್ಲಾಕ್ ಪಂಚಾಯಿತಿ 2025-26ರ ಹಣಕಾಸು ವಾರ್ಷಿಕ ಯೋಜನೆಯಲ್ಲಿ ಎಂಟು ರೈತರಿಗೆ ಹಾಲು ಕರೆಯುವ ಯಂತ್ರಗಳನ್ನು ವಿತರಿಸಿದೆ. ಈ ಯೋಜನೆ ಹೆಚ್ಚಿನ ಹಾಲು ಉತ್ಪಾದನೆಯೊಂದಿಗೆ, ದನ ಸಾಕಲು ರೈತರಿಗೆ ಹೆಚ್ಚಿನ ಪೆÇ್ರೀತ್ಸಾಹವನ್ನು ನೀಡುತ್ತಿದೆ.
ಹೈನುಗಾರರಿಗೆ ಜಾನುವಾರುಗಳನ್ನು ಸಾಕುವಲ್ಲಿ ಮೇವಿನ ಹುಲ್ಲಿನ ಕೊರತೆ ಸವಾಲಾಗಿ ಪರಿಣಮಿಸುತ್ತಿದ್ದು ಮೇವಿಗೆ ಭರಿಸುವ ವೆಚ್ಚದಿಂದ ಲಾಭದ ಅಂಶ ಕಡಿಮೆಯಾಗುತ್ತಿರುವುದನ್ನು ಗಮನದಲ್ಲಿರಿಸಿ ನೀಲೇಶ್ವರಂ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ. ನರೆಗಾ ಯೋಜನೆಯಲ್ಲಿ ಸೇರಿಸುವ ಮೂಲಕ 52 ಹೆಕ್ಟೇರ್ ಭೂಮಿಯನ್ನು ಮೇವಿನ ಹುಲ್ಲು ಕೃಷಿಗಾಗಿ ಸಿದ್ಧಪಡಿಸಲಾಗಿದೆ. ಜತೆಗೆ ನೀಲೇಶ್ವರ ಬ್ಲಾಕ್ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ 2025-26ನೇ ಆರ್ಥಿಕ ವರ್ಷದಲ್ಲಿ 18 ಹೆಕ್ಟೇರ್ ಭೂಮಿಯಲ್ಲಿ ಮೇವು ಕೃಷಿಯನ್ನು ವಿಸ್ತರಿಸಲಾಗುವುದು, ಇದಕ್ಕಾಗಿ 1 ಲಕ್ಷ 62 ಸಾವಿರ ರೂ. ಮೊತ್ತ ಹಂಚಿಕೆ ಮಾಡಲು ತೀರ್ಮಾನಿಸಿದೆ. ಕಡಿಮೆ ವೆಚ್ಚದಲ್ಲಿ ಪೌಷ್ಟಿಕ ಮೇವು ದೊರೆಯುವಂತೆ ನೋಡಿಕೊಲ್ಳುವುದು ಯೋಜನೆ ಉದ್ದೇಶವಾಗಿದೆ. ಹಾಲು ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಹುಲ್ಲುಗಾವಲು ಕ್ರಾಂತಿಗೆ ಬ್ಲಾಕ್ ಪಂಚಾಯಿತಿ ಮುಂದಾಗಿದೆ.



