ಕಾಸರಗೋಡು: ನಗರದಲ್ಲಿ ರಾತ್ರಿ ವೇಳೆ ಆಹಾರ ಪದಾರ್ಥ ವಿತರಿಸುವ ತಟ್ಟುಕಡಗಳಲ್ಲಿ ಆರೋಗ್ಯ ಇಲಾಖೆ, ಆಹಾರ ಸುರಕ್ಷತಾ ವಿಭಾಗ ಮತ್ತು ನಗರಸಭೆ ವತಿಯಿಂದ ತಪಾಸಣೆ ನಡೆಸಲಾಯಿತು. ಹನ್ನೊಂದು ಮಂದಿ ಅಧಿಕಾರಿಗಳ ತಂಡ ರಾತ್ರಿ ವೇಳೆ ಕಾಸರಗೋಡಿನ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿತು. ನಗರ ಸಭೆಯ ವಿವಿಧ ಮಳಿಗೆಗಳಲ್ಲಿ ಸ್ವಚ್ಛತಾ ಪರಿಶೀಲನೆ ನಡೆಸಲಾಯಿತು. ಪರಿಶೀಲಿಸಲಾದ ಹನ್ನೆರಡು ಮಳಿಗೆಗಳಲ್ಲಿ ಏಳು ಮಳಿಗೆಗಳಿಗೆ ಸ್ವಚ್ಛತಾ ಗುಣಮಟ್ಟವನ್ನು ಸುಧಾರಿಸಲು ನೋಟಿಸ್ ನೀಡಲಾಯಿತು.
ತಂಬಾಕು ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ ನಾಲ್ಕು ಮಳಿಗೆಗಳಿಗೆ ದಂಡ ವಿಧಿಸಲಾಯಿತು.
ನಗರದ ಬೀದಿ ವ್ಯಾಪಾರಿಗಳ ಬಗ್ಗೆ ಆರೋಗ್ಯ ಇಲಾಖೆಗೆ ಹಲವು ದೂರುಗಳು ಬರುತ್ತಿರುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮದಾಸ್ ಅವರು ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಹಾರದಲ್ಲಿ ವಿಷಾಂಶವಿರುವ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಜಿಲ್ಲಾಧಿಕಾರಿಗಳು ಆಯೋಜಿಸಿದ್ದ ಸಭೆಯಲ್ಲಿ ಆಹಾರ ವಿತರಿಸುವ ತಟ್ಟುಕಡಗಳಲ್ಲಿ ರಾತ್ರಿ ವೇಳೆ ತಪಾಸಣೆ ಆರಂಭಿಸಲಾಗಿದೆ. ನಗರಸಭೆಗಳು ಮತ್ತು ಇತರ ಪ್ರಮುಖ ನಗರಗಳಲ್ಲಿ ರಾತ್ರಿ ವೇಳೆ ಅಂಗಡಿಗಳು ಮತ್ತು ಹೋಟೆಲ್‍ಗಳ ತಪಾಸಣೆ ನಡೆಸಲಾಗುತ್ತಿದ್ದು, ತಪಾಸಣೆ ಮುಂದುವರಿಯಲಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ತಾಂತ್ರಿಕ ಸಹಾಯಕ ಆರ್. ಬಿಮಲ್‍ಭೂಷಣ್ ಮತ್ತು ಆಹಾರ ಸುರಕ್ಷತಾ ಅಧಿಕಾರಿ ಪಿ. ಬಿ.ಆದಿತ್ಯನ್, ಆರೋಗ್ಯ ಮೇಲ್ವಿಚಾರಕ ಎನ್.ಎ.ಶಾಜು, ಕ್ಲೀನ್ ಸಿಟಿ ವ್ಯವಸ್ಥಾಪಕ ಮಧುಸೂದನನ್, ಆರೋಗ್ಯ ನಿರೀಕ್ಷಕರಾದ ಪಿ.ವಿ.ಸಜೀವನ್, ಮಧು ಕೆ, ಜೆ.ಎಚ್.ಐ. ರಾಧಾಕೃಷ್ಣನ್ ಕೆ.ಜಿ, ಆಶಾ ಮೇರಿ, ಜಿ.ಬಿ. ಜಿ.ಆರ್, ಸುನೀಲ್ ಕುಮಾರ್, ಜನಾರ್ದನನ್ ತಪಾಸಣಾ ತಂಡದಲ್ಲಿದ್ದರು.


