ಬೀಜಿಂಗ್: ಚೀನಾದ ಖ್ಯಾತ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಶತಾಯುಷಿ ಚೆನ್ ನಿಂಗ್ ಯಾಂಗ್ (103) ಅವರು ನಿಧನರಾಗಿದ್ದಾರೆ.
ಚೆನ್ ನಿಂಗ್ ಯಾಂಗ್ ಅವರು 1922ರ ಸೆಪ್ಟೆಂಬರ್ 22ರಂದು ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದ ಹಫೆಯ್‌ನಲ್ಲಿ ಜನಿಸಿದ್ದರು.
1940ರ ದಶಕದಲ್ಲಿ ಯಾಂಗ್ ಅವರು ಅಮೆರಿಕದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ನಂತರ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು.
1954ರಲ್ಲಿ ಯಾಂಗ್ ಅವರು ಅಮೇರಿಕದ ಭೌತಶಾಸ್ತ್ರಜ್ಞ ರಾಬರ್ಟ್ ಮಿಲ್ಸ್ ಅವರೊಂದಿಗೆ ಸಮೀಕರಣಗಳ ಗುಂಪನ್ನು ರಚಿಸಿದ್ದರು. ಇದು ಸಾಪೇಕ್ಷತಾ ಸಿದ್ಧಾಂತದಷ್ಟೇ ಭೌತಶಾಸ್ತ್ರಕ್ಕೆ ಮುಖ್ಯವಾಗಿತ್ತು.
ಭೌತವಿಜ್ಞಾನ ನಿಯಮಗಳು ಬಿಂಬ, ಪ್ರತಿಬಿಂಬಗಳೆರಡರಲ್ಲಿ ಒಂದೇ ರೀತಿಯಲ್ಲಿದ್ದು ಕಾರ್ಯ ಸ್ವರೂಪತೆ ಸಂರಕ್ಷಿಸಲಾಗಿರುತ್ತದೆ ಎಂದು ನಂಬಲಾಗಿತ್ತು. ಆದರೆ ಕ್ಷೀಣ ಬೈಜಿಕ ಕ್ರಿಯೆಗಳಲ್ಲಿ ಕ್ರಿಯಾ ಸಾಮ್ಯತೆ ಸುರಕ್ಷಿತವಾಗಿರುವುದಿಲ್ಲ ಎಂದು ಯಾಂಗ್ ಸಂಶೋಧನೆಗಳ ಮೂಲಕ ತೋರಿಸಿದ್ದರು.
ಯಾಂಗ್ ಹಾಗೂ ಸಂಗ್ ಡ ಲೀ 1956ರಲ್ಲಿ ಕ್ಷೀಣ ಬೈಜಿಕ ಬಲಗಳಿಗೆ ಇದು ಅನ್ವಯವಾಗುವುದಿಲ್ಲ ಎಂಬ ಮುನ್ಸೂಚನೆ ನೀಡಿದ್ದರು. ಭೌತವಿಜ್ಞಾನದಲ್ಲಿ ಇವರ ಈ ಸಂಶೋಧನೆ ಪರಿಗಣಿಸಿ 1957ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.

