ಮಧೂರು: ಮನಸ್ಸು-ಬುದ್ಧಿಗಳ ಧನಾತ್ಮಕ ಶಕ್ತಿ ಚೈತನ್ಯ ಪುಟಿದೇಳಲು, ಆಂತರಂಗಿಕವಾದ ಧೀಶಕ್ತಿಯ ಪ್ರಾಪ್ತಿಗೆ ರುದ್ರಾಕ್ಷ ಧಾರಣೆ ದಿವ್ಯೌಷಧವಾಗಿದ್ದು, ಮನೆ-ಮನೆಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಈಶಾ ಫೌಂಡೇಶನ್ ಜಗತ್ತಿನಾದ್ಯಂತ ಮುನ್ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದು ಮಧೂರು ಶ್ರೀಮದನಂತೇಶ್ವರ ಶ್ರೀಸಿದ್ದಿವಿನಾಯಕ ದೇವಾಲಯದ ಆಡಳಿತಾಧಿಕಾರಿ ಕೆ.ಜಗದೀಶ ಪ್ರಸಾದ್ ಕೂಡ್ಲು ಅಭಿಒಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ವಲಯ ಈಶಾ ಫೌಂಡೇಶನ್ ನೇತೃತ್ವಲ್ಲಿ ಈಶಾ ಫೌಂಡೇಶನ್ ಕೊಯಮತ್ತೂರು ಇಲ್ಲಿ ಪೂಜಿಸಲ್ಪಟ್ಟ ರುದ್ರಾಕ್ಷೆಗಳನ್ನು ಉಚಿತವಾಗಿ ವಿತರಿಸುವ ಸಮಾರಂಭವನ್ನು ಭಾನುವಾರ ಶ್ರೀಕ್ಷೇತ್ರ ಮಧೂರಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಈಶಾ ಫೌಂಡೇಶನ್ ಕಾಸರಗೋಡು ವಲಯ ಸಂಚಾಲಕ, ನಿವೃತ್ತ ವಾಯುಸೇನಾಧಿಕಾರಿ ಪಜ್ಜ ತಿರುಮಲೇಶ್ವರ ಭಟ್ ಅವರು ಸುಪ್ರೀಂ ಕೋರ್ಟಿನ ಹಿರಿಯ ವಕೀಲ ವಿ.ಎನ್.ರಘುಪತಿ ಅವರಿಗೆ ರುದ್ರಾಕ್ಷಿ ವಿತರಿಸಿ ಚಾಲನೆ ನೀಡಿದರು. ರುದ್ರಾಕ್ಷಿಯನ್ನು ಗೌರವಯುತವಾಗಿ ಸ್ವೀಕರಿಸಿದ ವಿ.ಎನ್.ರಘುಪತಿ ಅವರು ಮಾತನಾಡಿ, ಸನಾತನ ಧರ್ಮ, ಪರಂಪರೆಗಳನ್ನು ಎತ್ತಿಹಿಡಿಯುವಲ್ಲಿ ಈಶಾ ಫೌಂಡೇಶನ್ ನ ಕಾರ್ಯಚಟುವಟಿಕೆಗಳು ಸ್ತುತ್ಯರ್ಹವಾದುದು. ಯೋಗ, ಧ್ಯಾನಾದಿ ಅಷ್ಟಾಂಗ ರೂಪದ ಪ್ರಾಚೀನ ಜೀವನ ಪಥವನ್ನು ಸಮರ್ಪಕವಾಗಿ ಜನರೆಡೆಗೆ ತಲುಪಿಸುವ ಫೌಂಡೇಶನ್ ನ ನಿರಂತರ ವ್ಯವಸ್ಥೆಗಳಿಗೆ ಜನಬೆಂಬಲ ಇನ್ನಷ್ಟು ಲಭ್ಯವಾಗಬೇಕು. ಯುವ ಜನರಲ್ಲಿ ಧನಾತ್ಮಕತೆಯನ್ನು ಮೂಡಿಸುವ ಇಂತಹ ಕಾರ್ಯಚಟುವಟಿಕೆಗಳಿಗೆ ಅನುಗ್ರಹ ಇರುತ್ತದೆ ಎಂದರು.
ಶ್ಯಾಮ ಮಧ್ಯಸ್ಥ, ಸುಬ್ರಹ್ಮಣ್ಯ ಭಟ್, ಫೌಂಡೇಶನ್ ಕಾರ್ಯಕರ್ತರಾದ ಜಿತಿನ್, ದೀಕ್ಷಾ, ಪ್ರಕಾಶ ಅಡೂರು, ಅಜಿತ್ ಕಾಂಞಂಗಾಡು, ರಮ್ಯಾ ಮಾಧವನ್, ಬಾಲನ್, ರಾಮಚಂದ್ರ ಭಟ್, ಪ್ರಕಾಶ ಚೆರ್ವತ್ತೂರು, ಹರಿನಾರಾಯಣ್, ರಾಧಿಕಾ, ರಾಜೇಂದ್ರನ್, ಪ್ರಾರ್ಥನಾ ರಾಮಚಂದ್ರ ಭಟ್ ಮೊದಲಾದವರು ನೇತೃತ್ವ ನೀಡಿದರು. ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ರುದ್ರಾಕ್ಷ ದೀಕ್ಷೆ ನೀಡಲಾಯಿತು.

.jpg)
.jpg)
.jpg)
