ತಿರುವನಂತಪುರಂ: ಕೇರಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗೆ ಮಲಯಾಳ ಭಾಷೆ ಕಡ್ಡಾಯಗೊಳಿಸುವ ವಿಧೇಯಕಕ್ಕೆ ಕೇರಳ ವಿಧಾನಸಭೆ ಅನುಮೋದನೆ ನೀಡಿದ್ದು, ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಲ್ಲಿ ಮತ್ತೆ ಆತಂಕ ಎದುರಾಗಿದೆ.
ಹೊರ ರಾಜ್ಯಗಳಲ್ಲಿ ಕಲಿತ ಬಳಿಕ ಕೇರಳದಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳಿಗೆ ಮಲಯಾಳ ಕಲಿಕೆ ಕಡ್ಡಾಯಗೊಳಿಸಲಾಗಿಲ್ಲ. ಈ ಮಕ್ಕಳು ಇಚ್ಛಿಸಿದಲ್ಲಿ ಮಲಯಾಳ ಆಯ್ಕೆ ಮಾಡಿಕೊಳ್ಳಬಹುದು ಎಂದು ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರು ಹಾಗೂ ಇಡುಕ್ಕಿಯಲ್ಲಿರುವ ತಮಿಳು ಭಾಷಾ ಅಲ್ಪಸಂಖ್ಯಾತರನ್ನು ಕಡ್ಡಾಯ ಮಲಯಾಳ ಭಾಷಾ ಕಲಿಕೆಯಿಂದ ಹೊರತುಪಡಿಸುವ ಬಗ್ಗೆ ವಿಧೇಯಕದಲ್ಲಿ ಸ್ಪಷ್ಟ ಉಲ್ಲೇಖ ಮಾಡಿಲ್ಲ. ಇದು ಕೇರಳದಲ್ಲಿರುವ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರನ್ನು ಆತಂಕಕ್ಕೆ ತಳ್ಳಿದೆ. ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರಾಗಲಿ ಇಡುಕ್ಕಿಯ ತಮಿಳು ಭಾಷಿಗರ ಬಗ್ಗೆಯಾಗಲೀ ಸರ್ಕಾರ ವಿಧೇಯಕದ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆಯನ್ನೂ ನೀಡಿದಿರುವುದು ಭಾಷಾ ಅಲ್ಪಸಂಖ್ಯಾತರನ್ನು ಗೊಂದಲಕ್ಕೀಡುಮಾಡಿದೆ.
ಈ ಮಧ್ಯೆ ಮಲಯಾಳ ಭಾಷೆಗಾಗಿ ಪ್ರತ್ಯೇಕ ಇಲಾಖೆ, ಇದರ ಉಸ್ತುವಾರಿಗಾಗಿ ಸಚಿವರನ್ನು ನೇಮಿಸುವುದರ ಜತೆಗೆ ನಿರ್ದೇಶನಾಲಯವನ್ನೂ ತೆರೆಯುವ ಅಂಶವನ್ನು ವಿಧೇಯಕದಲ್ಲಿ ನಮೂದಿಸಲಾಗಿದೆ. ರಾಜ್ಯ ಕಾನೂನು ಖಾತೆ ಸಚಿವ ಪಿ. ರಾಜೀವನ್ ಮಸೂದೆಯನ್ನು ಸದನದ ಅನುಮೋದನೆಗಾಗಿ ವಿಧಾನಸಭೆಯಲ್ಲಿ ಮಂಡಿಸಿದ್ದರು. ತಿರುವನಂತಪುರ ಸೆಕ್ರೆಟೇರಿಯೆಟ್‍ನ ಅಧಿಕಾರಿ ವರ್ಗ ಆಡಳಿತ ಸುಧಾರಣಾ(ಔದ್ಯೋಗಿಕ ಭಾಷೆ)ಇಲಾಖೆ ಹೆಸರನ್ನು ಇನ್ನು ಮುಂದಕ್ಕೆ ಮಲಯಾಳ ಭಾಷಾ ಅಭಿವೃದ್ಧಿ ಇಲಾಖೆ ಎಂದು ಮರು ನಾಮಕರಣ ಮಾಡಲೂ ತೀರ್ಮಾನಿಸಲಾಗಿದೆ.
ಜಿಲ್ಲಾ ನ್ಯಾಯಾಲಯ ಹಾಗೂ ಕೆಳ ನ್ಯಾಯಾಲಯಗಳ ಎಲ್ಲಾ ವ್ಯವಹಾರ, ತೀರ್ಪುಗಳನ್ನು ಹೈಕೋರ್ಟಿನ ಅನುಮತಿಯೊಂದಿಗೆ ಮಲಯಾಳದಲ್ಲಿ ಪ್ರಕಟಿಸಬಹುದಾಗಿದೆ. ರಾಜ್ಯದಲ್ಲಿ ಮಲಯಾಳ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ 2015ರಲ್ಲೇ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿತ್ತು. ಆದರೆ ರಾಷ್ಟ್ರಪತಿ ಇದಕ್ಕೆ ಅಂಕಿತ ಹಾಕದ ಹಿನ್ನೆಲೆಯಲ್ಲಿ ಸರ್ಕಾರ ಹೊಸ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಸದನದ ಅನುಮೋದನೆ ಪಡೆದುಕೊಂಡಿದೆ.




