ಉಪ್ಪಳ: ದೈವ ದೇವರುಗಳನ್ನು ಧಿಕ್ಕರಿಸಿ ರಾಜಕೀಯ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಪಿಣರಾಯಿ ನೇತೃತ್ವದ ಸಿಪಿಎಂ ಸರಕಾರ ತನ್ನ ಅಂಧಾ ದರ್ಬಾರ್ ದೆಸೆಯಿಂದ ಅಧಿಕಾರ ಕೈ ತಪ್ಪಿ ಹೋಗುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ದೈವ ದೇವರುಗಳ ಮೊರೆ ಹೋಗುವ ಮೂಲಕ ಆಸ್ತಿಕರ ಭಾವನೆಗಳಿಗೆ ಘಾಸಿಯುಂಟು ಮಾಡಿದೆ. ಅವಸರದ ಕಳ್ಳರಂತೆ ಕಂಡ ಕಂಡ ದೇವಸ್ಥಾನಗಳ ಹುಂಡಿಗೆ ಕೈಹಾಕುವುದು ಮಾತ್ರವಲ್ಲದೆ ಶಬರಿಮಲೆ ಕ್ಷೇತ್ರದ ಬಾಗಿಲು, ದಾರಂದ ಮತ್ತಿತರ ಸ್ವರ್ಣಲೇಪಿತ ಪೂಜನೀಯ ವಸ್ತುಗಳನ್ನು ಕದ್ದೊಯ್ಯುವ ನಿರ್ಲಜ್ಜ ಹಗಲು ದರೋಡೆಗೆ ಇಳಿದಿದೆ. ಈ ಆಟವು ಆ ಪಕ್ಷದ ಅಂತ್ಯದಲ್ಲಿ ಕೊನೆಯಾಗಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.
ಶಬರಿಮಲೆ ಕ್ಷೇತ್ರದ ಸ್ವರ್ಣ ಚೋರತನದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ನಿಯಂತ್ರಣದಲ್ಲಿರುವ ದೇವಸ್ವಂ ಬೋರ್ಡ್, ದೇವಸ್ವಂ ಸಚಿವರು ಹಾಗೂ ಆಡಳಿತಾರೂಢರ ಪಾಲುದಾರಿಕೆ ಹಾಗೂ ಬೆಂಬಲವಿಲ್ಲದೆ ಈ ಅತಿ ಸುರಕ್ಷಿತ ದೇವಸ್ಥಾನದ ಕೇಜಿಗಟ್ಟಲೆ ಚಿನ್ನ ಕದ್ದು ಅದರ ಬದಲು ಹಿತ್ತಾಳೆಯ ಶಿಲ್ಪಗಳನ್ನು ಅಳವಡಿಸಿರುವುದು ಲವಲೇಶ ವಿವೇಕವಿರುವವರು ನಂಬುವ ವಿಷಯವಲ್ಲ. ಇದು ಸರ್ಕಾರದ ವಂಚನೆಯ ಪ್ರತೀಕ. ಉಣ್ಣಿಕೃಷ್ಣನ್ ಪೋತ್ತಿಯೆಂಬ ನಕಲಿ ದಾನಿಯನ್ನು ಮುಂದಿಟ್ಟುಕೊಂಡು ಶಬರಿಮಲೆ ಕ್ಷೇತ್ರದ ಸ್ವರ್ಣ ಕವಾಟ ಕಂಡವರ ಮನೆಗಳಲ್ಲಿ ಅನಧಿಕೃತವಾಗಿ ಪೂಜೆಗಿಟ್ಟು ಹಣ ಜೋಳಿಗೆಗೆ ತುಂಬಿಸಿದ್ದು ಮಾತ್ರವಲ್ಲದೆ ಕದ್ದು ಮಾರಾಟ ಮಾಡಿದ್ದು ಪ್ರತಿಕೂಲ ಹವಾಮಾನದಲ್ಲೂ ನಿಯಮಿತವಾಗಿ ಕಠಿಣ ವೃತ ಆಚರಿಸಿ ಬರಿಗಾಲಲ್ಲಿ ಸನ್ನಿಧಾನಕ್ಕೆ ತಲುಪಿ ಕಾಣಿಕೆ ನೀಡಿದ ಲಕ್ಷಾಂತರ ಭಕ್ತರ ಭಾವನೆಗಳಿಗೆ ಎಸಗಲಾದ ದ್ರೋಹವಾಗಿದೆ. ಈ ಗಂಟುಕಳ್ಳರಿಗೆ ಬೆಂಬಲ ನೀಡಿದ ದೇವಸ್ವಂ ಸಚಿವ, ದೇವಸ್ವಂ ಬೋರ್ಡ್ ಅಧ್ಯಕ್ಷರು ಸಹಿತ ಜವಾಬ್ದಾರಿಯುತ ಸ್ಥಾನದಲ್ಲಿರುವ ಎಲ್ಲರೂ ರಾಜೀನಾಮೆ ನೀಡಿ ಕಾನೂನು ಕ್ರಮ ಎದುರಿಸಲು ಸಿದ್ಧರಾಗಬೇಕು ಎಂದರು.
ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಾಬು ಬಂದ್ಯೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ನೇತಾರರಾದ ಫಾರೂಕ್ ಶಿರಿಯ, ನವೀನ್ ಶೆಟ್ಟಿ ಚೆರುಗೋಳಿ, ಹುಸೈನ್ ಕುಬಣೂರ್, ಮೋಹನ ಮೇಸ್ತ್ರಿ, ಗಣೇಶ ನಾವಡ, ಬಾಬು ಇಚ್ಲಂಗೋಡು, ಸುಂದರ ಅಂಬಟೆಗೋಳಿ, ಗೀತಾ ಬಂದ್ಯೋಡು, ದೇವಕಿ, ಕುಂಞಲಿ ಇಚ್ಲಂಗೋಡು, ಇಸ್ಮಾಯಿಲ್ ಬೇಕೂರು, ಹಾರಿಸ್ ಪಾರಕಟ್ಟೆ, ಮೊಹಮ್ಮದ್ ಹನೀಫ್, ಯೂಸುಫ್ ಮುಟ್ಟಂ, ರಾಮಕೃಷ್ಣ ಪುಳಿಕುತ್ತಿ, ವಾಮನ ಕುಟ್ಟನ್ ಮುಂತಾದವರು ಉಪಸ್ಥಿತರಿದ್ದರು. ಒ.ಎಂ.ರಶೀದ್ ಸ್ವಾಗತಿಸಿ, ಹನೀಫ್ ಪಚ್ಚಂಬಳ ವಂದಿಸಿದರು.






