ಉಪ್ಪಳ: ಕೊಂಡೆವೂರಿನ ಯಾಗ ಭೂಮಿಯು ಪ್ರಕೃತಿಯ ವರದಾನವಾಗಿದೆ. ಆಧ್ಯಾತ್ಮಿಕವಾದ ಸಾಂಸ್ಕøತಿಕ ಕೇಂದ್ರ. ಪ್ರಕೃತಿಯನ್ನು ಸಂರಕ್ಷಿಸುವುದರ ಮೂಲಕ ನಾವು ಅಭಿವೃದ್ಧಿಯನ್ನು ಕಾಣಬೇಕು ಹೊರತು ನಾಶಪಡಿಸುವುದರ ಮೂಲಕ ಅಲ್ಲ. ಇಲ್ಲಿಗೆ ತಲುಪಿದಾಗ ನಿಷ್ಕಲ್ಮಶವಾದ ಗಾಳಿ, ಮನೋಹರವಾದ ಪ್ರಕೃತಿ ಒಳ್ಳೆಯ ಗೋಶಾಲೆ, ನಕ್ಷತ್ರವನ, ಔಷಧೀಯ ಸಸ್ಯಗಳು, ಸಂಸ್ಕಾರಯುತವಾಗಿ ಕಲಿಯುತ್ತಿರುವ ವಿದ್ಯಾರ್ಥಿಗಳು ಗಮನ ಸೆಳೆಯುತ್ತದೆ ಎಂದು ಹಿರಿಯ ರಾಜಕೀಯ ನೇತಾರ, ಮಿಝೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚೆಗೆ ಮಠಕ್ಕೆ ಭೇಟಿ ನೀಡಿದ ಬಳಿಕ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳು ಆಶ್ರಮದ ಮಕ್ಕಳಿಗೆ ಕುಮ್ಮನಂ ರಾಜಶೇಖರನ್ ಅವರ ಪರಿಚಯ ಮಾಡಿಕೊಟ್ಟರು. ಕುಮ್ಮನಂ ಅವರನ್ನು ಸ್ವಾಮೀಜಿಗಳು ಶಾಲು ಹೊದೆಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಉದ್ಯಮಿ ಶಿವಶಂಕರ ನೆಕ್ರಾಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ರಾಜಕೀಯ ಮುಖಂಡರಾದ ಸುಧಾಮ ಗೋಸಾಡ, ವಿಜಯ ರೈ, ಧಾರ್ಮಿಕ ಮುಖಂಡರಾದ ಕೃಷ್ಣ ಶಿವಕೃಪ ಕುಂಜತ್ತೂರು, ಕಾರ್ತಿಕ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.






