ಕುಂಬಳೆ: ನಿರಂತರ ಸುರಿಯುತ್ತಿರುವ ಮಳೆಯಿಂದ ಪ್ರಮುಖ ವಾಣಿಜ್ಯಬೆಳೆ ಅಡಕೆ ನೆಲಕಚ್ಚುತ್ತಿದೆ. ಮಹಾಳಿ ರೋಗದಿಂದ ಕಂಗೆಟ್ಟಿರುವ ಕೃಷಿಕರಿಗೆ, ಉಳಿದಿರುವ ಅಡಕೆಯನ್ನು ಸಂರಕ್ಷಿಸುವುದು ನಿರಂತರ ಮಳೆ ಸವಾಲಾಗಿ ಪರಿಣಮಿಸಿದೆ.
ನಿರಂತರವಾಗಿ ಸುರಿದ ಮಳೆಯಿಂದ ಕಾಸರಗೋಡು ಜಿಲ್ಲಾದ್ಯಂತ ಅಡಕೆ ಕೃಷಿ ಅರ್ಧಕ್ಕರ್ಧ ಕುಸಿದಿದೆ. ಅಡಕೆ ಕೊಳೆ ರೋಗಕ್ಕೆ ಬೋರ್ಡೋ ಸಿಂಪರಣೆ ಪರಿಣಾಮಕಾರಿಯಗಿದ್ದರೂ, ನಿರಂತರ ಸುರಿದ ಮಳೆಯಿಂದ ಕೃಷಿಕರಿಗೆ ಔಷಧ ಸಿಂಪರಣೆ ಸಾಧ್ಯವಾಗಿರಲಿಲ್ಲ. ಇದರಿಂದ ಕೊಳೆರೋಗ ತೋಟಗಳಿಗೆ ವ್ಯಾಪಿಸಿ ಎಳೆಯ ಅಡಕೆ ಸಂಪೂರ್ಣ ಉದುರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ರೋಗಬಾಧಿತ ಅಡಕೆ ಗೊನೆಗಳು ಮರದಲ್ಲಿಯೇ ಕೊಳೆತ ಸ್ಥಿತಿಯಲ್ಲಿದೆ. ಇದರ ಜತೆಗೆ ಅಡಕೆ ಮರಕ್ಕೆ ಎಲೆಚುಕ್ಕಿ ರೋಗ, ಸೋಗೆ ಒಣಗುವ ಕಾಯಿಲೆ ಬಾಧಿಸಿ ಅಡಕೆ ಮರ ಸಾವಿಗೀಡಾಗುತ್ತಿದೆ.
ಬಹುತೇಕ ಕೃಷಿಕರು, ಉದುರುವ ಎಳೆಯ ಅಡಕೆಯನ್ನು ಸಂಗ್ರಹಿಸುವ ಗೋಜಿಗೂ ಹೋಗದಿರುವುದರಿಂದ ತೋಟದಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ಕೃಷಿಕರು ತೋಟ ಶುಚೀಕರಿಸುವ ನಿಟ್ಟಿನಲ್ಲಿ ಉದುರಿದ ಅಡಕೆಯನ್ನು ಮೂಟೆಮಾಡಿ ಹೊಳೆ, ತೋಡಿಗೆ ಸುರಿಯುತ್ತಿದ್ದಾರೆ. ಒಟ್ಟಿನಲ್ಲಿ ಅಡಕೆ ಕೃಷಿಕರ ಸ್ಥಿತಿ ಶೋಚನೀಯಾವಸ್ಥೆಯಲ್ಲಿದೆ. ಅಡಕೆಗೆ ಉತ್ತಮ ಧಾರಣೆಯಿದ್ದರೂ, ಇಳುವರಿಯಿಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ. ಅಡಕೆ ಬೆಳೆಯನ್ನೇ ಆಶ್ರಯಿಸಿಕೊಮಡಿರುವ ಕೃಷಿಕರ ಬದುಕು ಮೂರಾಬಟ್ಟೆಯಾಗಿದೆ. ಅಡಕೆ ಕೃಷಿ ಅಭಿವೃದ್ಧಿಗಾಗಿ 13ಕೋಟಿ ರೂ. ಮೊತ್ತದ ಪ್ರತ್ಯೇಕ ಪ್ಯಾಕೇಜ್ ಜಾರಿಯಲ್ಲಿರುವುದಾಗಿ ಕೃಷಿ ಇಲಾಖೆ ಹೇಳುತ್ತಿದ್ದರೂ, ಇದ್ಯಾವುದೂ ಜಾರಿಯಾಗಿಲ್ಲ.
ಕೃಷಿಕರ ಮೊರೆ:
ಕಳೆದ ಎರಡು ವರ್ಷಗಳಿಂದ ಅಡಕೆ ಕೃಷಿಯನ್ನು ಬಾಧಿಸುತ್ತಿರುವ ಮಹಾಳಿ ರೋಗದಿಂದ ಬಹುತೇಕ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಕೃಷಿ ಅಗತ್ಯಕ್ಕಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಕೃಷಿಕರಿಗೆ ಬಾಕಿ ಮೊತ್ತ ಪಾವತಿಸಲು ಕೆಎಸ್‍ಇಬಿ ನೋಟೀಸು ಜಾರಿಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದೆಡೆ ಕೃಷಿ ನಾಶ, ಇನ್ನೊಂದೆಡೆ ವಿದ್ಯುತ್ ಬಿಲ್ ಬಾಕಿ ಪಾವತಿಸಲು ಇಲಾಖೆ ಒತ್ತಡ, ಕೃಷಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯ 200ಕ್ಕೂ ಹೆಚ್ಚು ಮಂದಿಗೆ ಈ ರೀತಿ ವಿದ್ಯುತ್ ಬಿಲ್ ಲಭಿಸಿದೆ. ಕೃಷಿಗೆ ಉಚಿತ ವಿದ್ಯುತ್ ಯೋಜನೆಯಿದ್ದರೂ, ಇದನ್ನು ಪ್ರತಿ ವರ್ಷ ನವೀಕರಿಸದಿರುವ ಹೆಸರಲ್ಲಿ ಪ್ರಸಕ್ತ ಎಲ್ಲಾ ಕೃಷಿಕರಿಗೂ ವಿದ್ಯುತ್ ಶುಲ್ಕ ಪಾವತಿಸುವಂತೆ ಕೆಎಸ್‍ಇಬಿ ಒತ್ತಡ ಹೇರುತ್ತಿದೆ. ಕೃಷಿಕರ ಬಾಕಿ ವಿದ್ಯುತ್ ಮೊತ್ತ ಸರ್ಕಾರವೇ ಪಾವತಿಸಬೇಕು, ಸರ್ವೇ ನಡೆಸಿ ಕೃಷಿ ನಾಶದ ಬಗ್ಗೆ ಲೆಕ್ಕಾಚಾರ ಮಾಡಿ ಪರಿಹಾರ ಒದಗಿಸಬೇಕು, ಕೃಷಿಗಾಗಿ ಬ್ಯಾಂಕಿನಿಂದ ಪಡೆದ ಸಾಲಕ್ಕೆ ಸರ್ಕಾರ ಮೂರು ವರ್ಷಗಳ ಮೊರಟೋರಿಯಂ ಘೋಷಿಸಬೇಕು, ಔಷಧ ಸಿಂಪರಣ ಯಂತ್ರಗಳಿಗೆ ಸಬ್ಸಿಡಿ ಒದಗಿಸಬೇಕು ಮುಂತಾದ ಬೇಡಿಕೆ ಈಡೇರಿಸುವಂತೆ ಕೃಷಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಭಿಮತ:
ಮಹಾಳಿ ರೋಗ ಅಡಕೆ ಕೃಷಿಯನ್ನು ನೆಲಕಚ್ಚುವಂತೆ ಮಾಡಿದೆ. ಕೃಷಿ ನಾಶದಿಂದ ಕಂಗೆಟ್ಟಿರುವ ಅಡಕೆ ಕೃಷಿಕರಿಗೆ ವಿದ್ಯುತ್ ಶುಲ್ಕ ಪಾವತಿಗೆ ಭಾರಿ ಮೊತ್ತದ ಬಿಲ್ ನೀಡುವ ಮೂಲಕ ಕೆಎಸ್‍ಇಬಿ ಶಾಕ್ ನೀಡಿದೆ. ಉಚಿತ ವಿದ್ಯುತ್ ಯೋಜನೆಗೆ ಏಕಾಏಕಿ ಬಿಲ್ ನೀಡಿರುವ ಕ್ರಮ ಖಂಡನೀಯ. ಸಂಕಷ್ಟದಲ್ಲಿರುವ ಕೃಷಿಕರ ಸಹಾಯಕ್ಕೆ ಸರ್ಕಾರ ಮುಂದಾಗಬೇಕು. ಸ್ಥಗಿತಗೊಂಡಿರುವ ಕೃಷಿಕರ ಪ್ರತ್ಯೇಕ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದರ ಜತೆಗೆ ಹೊಳೆಯಿಂದ ಕೃಷಿ ಅಗತ್ಯಕ್ಕೆ ನೀರು ಬಳಸಲು ಅನುಮತಿ ಕಲ್ಪಿಸಬೇಕು.
ಶುಕೂರ್ ಕೇನಾಜೆ, ಪ್ರಗತಿಪರ ಕೃಷಿಕ, ಕಿಸಾನ್ ಸೇನೆ ಕಾರ್ಯದರ್ಶಿ
ಪುತ್ತಿಗೆ



