ಶ್ರೀನಗರ: 2019ರಲ್ಲಿ 370ನೇ ವಿಧಿಯ ರದ್ದತಿಯ ಬಳಿಕ ಜಮ್ಮುಕಾಶ್ಮೀರದಲ್ಲಿ ನಡೆದ ಮೊದಲ ರಾಜ್ಯಸಭಾ ಚುನಾವಣೆಯಲ್ಲಿ ಈ ಕೇಂದ್ರಾಡಳಿತ ಪ್ರದೇಶದ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಮೂರನ್ನು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಗೆದ್ದಿದ್ದರೆ ಒಂದು ಸ್ಥಾನ ಪ್ರತಿಪಕ್ಷ ಬಿಜೆಪಿ ಪಾಲಾಗಿದೆ.
ತನ್ನ ಅಭ್ಯರ್ಥಿಗಳಾದ ಚೌಧರಿ ಮುಹಮ್ಮದ್ ರಮಝಾನ ಅವರು ಮೊದಲ, ಸಜಾದ್ ಕಿಚ್ಲೂ ಅವರು ಎರಡನೇ ಮತ್ತು ಜಿ.ಎಸ್(ಶಮ್ಮಿ) ಒಬೆರಾಯ್ ಅವರು ಮೂರನೇ ರಾಜ್ಯಸಭಾ ಸ್ಥಾನವನ್ನು ಗೆದ್ದುಕೊಂಡಿದ್ದಾರೆ ಎಂದು ಆಡಳಿತಾರೂಢ ಎನ್‌ಸಿ ಪ್ರಕಟಿಸಿದೆ.
ಪಕ್ಷದ ಹಿರಿಯ ನಾಯಕ ಸತ್ ಶರ್ಮಾ ಅವರು 54 ಮತಗಳ ಪೈಕಿ 32 ಮತಗಳನ್ನು ಪಡೆದು ಎನ್‌ಸಿಯ ಇಮ್ರಾನ್ ನಬಿ ದಾರ್ ಅವರನ್ನು ಸೋಲಿಸುವ ಮೂಲಕ ಬಿಜೆಪಿಯು ನಾಲ್ಕನೇ ಸ್ಥಾನವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.
ಶ್ರೀನಗರದಲ್ಲಿರುವ ಜಮ್ಮುಕಾಶ್ಮೀರ ವಿಧಾನಸಭಾ ಸಂಕೀರ್ಣದಲ್ಲಿ ಶುಕ್ರವಾರ ಬೆಳಿಗ್ಗೆ ಮತದಾನ ನಡೆದಿತ್ತು. ಇದರೊಂದಿಗೆ ಸುದೀರ್ಘ ಕಾಲದ ಬಳಿಕ ಜಮ್ಮುಕಾಶ್ಮೀರವು ರಾಜ್ಯಸಭೆಯಲ್ಲಿ ಪ್ರಾತಿನಿಧ್ಯವನ್ನು ಪಡೆದುಕೊಂಡಿದೆ.
ವಿಧಾನಸಭಾ ಆವರಣದಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತದಾನ ನಾಲ್ಕು ಗಂಟೆಗೆ ಅಂತ್ಯಗೊಂಡ ಬೆನ್ನಿಗೆ ಮತ ಎಣಿಕೆ ನಡೆದು ಬಳಿಕ ಫಲಿತಾಂಶಗಳನ್ನು ಘೋಷಿಸಲಾಯಿತು.




