ಕಾಸರಗೋಡು: ಜಿಲ್ಲೆಯ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕುಗಳ ವಿವಿಧ ಭಾಗಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ವಿಭಾಗಗಳಲ್ಲಿ ಒಳಪಡುವ ಮುಗೇರ, ನಲಿಕೆತ್ತಾಯ, ಚಕ್ಲಿಯ, ಮುಂತಾದ ವಿಭಾಗಗಳ ಖಾಸಗಿ ಕ್ಷೇತ್ರ ಹಾಗೂ ದೈವಸ್ಥಾನಗಳಿಗೆ ಸೂಕ್ತ ರೀತಿಯಲ್ಲಿ ಆರ್ಥಿಕ ಸಹಾಯ ಒದಗಿಸುವಂತೆ ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ ಶಂಕರ ಆದೂರು ಅವರು ರಾಜ್ಯ ಮುಜರಾಯಿ ಖಾತೆ ಸಚಿವ ವಿ ಎನ್ ವಾಸವನ್ ಅವರನ್ನು ಮನವಿ ಮೂಲಕ ಆಘ್ರಹಿಸಿದ್ದಾರೆ.
ತಿರುವನಂತಪುರದ ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿ, ದೇವಸ್ವಂ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಕ್ಷೇತ್ರ ಹಾಗೂ ದೈವಸ್ಥಾನಗಳಿಗೆ ಬೋರ್ಡಿಗೆ ಬರುವ ಒಟ್ಟು ಮೊತ್ತದ ಶೇ.10 ಮಾತ್ರ ಪರಿಶಿಷ್ಟ ವಿಭಾಗದ ಖಾಸಗಿ ದೈವಸ್ಥಾನಗಳಿಗೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದಿರುವ ಪ್ರಸಕ್ತ ವರ್ಗಗಳ ದೈವಸ್ಥಾನಗಳಿಗೆ 5 ಲಕ್ಷದಿಂದ 10 ಲಕ್ಷದ ವರೆಗೆ ಹಣ ಮಂಜೂರುಮಾಡಬೇಕು ಎಂದು ಸಚಿವರನ್ನು ಒತ್ತಾಯಿಸಿದರು. ಈ ಸಂದರ್ಭ ಪರಿಶಿಷ್ಟ ಜಾತಿ ಕ್ಷೇಮ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ಅಧ್ಯಕ್ಷ ಜಗದೀಶ್, ಪ್ರಾಂತ್ಯ ಸಮಿತಿ ಸದಸ್ಯ ಚಂದ್ರನ್ ಕೆಕ್ಕಾಲ್ ಮೊದಲಾದವರು ಜತೆಗಿದ್ದರು.





