HEALTH TIPS

ಕೆಮ್ಮಿನ 'ಕಲುಷಿತ' ಸಿರಪ್‌: ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್‌ ವಜಾ

ನವದೆಹಲಿ: ಕೆಮ್ಮಿನ 'ಕಲುಷಿತ' ಸಿರಪ್‌ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳು ಮೃತಪಟ್ಟ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ, ನ್ಯಾಯಮೂರ್ತಿ ಉಜ್ಜಲ್‌ ಭುಯಾನ್‌, ಕೆ. ವಿನೋದ್‌ ಚಂದ್ರನ್‌ ಅವರನ್ನೊಳಗೊಂಡ ಪೀಠವು, ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಪಿಐಎಲ್‌ ವಜಾಗೊಳಿಸುವ ಮುನ್ನ ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ ಅವರ ವಾದವನ್ನು ಆಲಿಸಿತು. ಸಾಲಿಸಿಟರ್‌ ಜನರಲ್‌ ಪಿಐಎಲ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

'ಸದ್ಯ ಈ ಪ್ರಕರಣದಲ್ಲಿ ಮಧ್ಯಪ್ರದೇಶ, ತಮಿಳುನಾಡು ಅಥವಾ ಇತರೆ ರಾಜ್ಯವನ್ನು ಪ್ರತಿನಿಧಿಸಿ ನಾನು ಕೋರ್ಟ್‌ಗೆ ಬಂದಿಲ್ಲ. ಆದರೆ, 'ಕಲುಷಿತ' ಸಿರಪ್‌ ವಿಷಯದಲ್ಲಿ ಈಗಾಗಲೇ ಈ ರಾಜ್ಯಗಳು ತೆಗೆದುಕೊಂಡಿರುವ ಕ್ರಮಗಳನ್ನು ದುರ್ಬಲಗೊಳಿಸುವುದು ಸರಿಯಲ್ಲ. ಅಲ್ಲಿ ಕಾನೂನು ಜಾರಿ ವಿಧಾನಗಳು ಸಮರ್ಪಕವಾಗಿದೆ' ಎಂದು ಸಾಲಿಸಿಟರ್‌ ಜನರಲ್‌ ನ್ಯಾಯಪೀಠಕ್ಕೆ ಅರುಹಿದರು.

ಆರಂಭದಲ್ಲಿ ನೋಟಿಸ್‌ ಜಾರಿಗೊಳಿಸುವ ಬಗ್ಗೆ ಪೀಠ ಅಭಿಪ್ರಾಯ ವ್ಯಕ್ತಪಡಿಸಿತಾದರೂ, ಸಾಲಿಸಿಟರ್‌ ಜನರಲ್‌ ಆಕ್ಷೇಪದ ನಂತರ, ಪಿಐಎಲ್‌ ತಿರಸ್ಕರಿಸಿರುವುದಾಗಿ ಪ್ರಕಟಿಸಿತು. 'ಅರ್ಜಿದಾರರು ದಿನಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಓದಿ, ಕೋರ್ಟ್‌ಗೆ ಧಾವಿಸಿದ್ದಾರೆ' ಎಂದು ನ್ಯಾಯಪೀಠ ಹೇಳಿತು.

'ಸಿಬಿಐ ತನಿಖೆಯ ಜತೆಗೆ ಔಷಧ ಸುರಕ್ಷತಾ ಕಾರ್ಯವಿಧಾನಗಳಲ್ಲಿ ವ್ಯವಸ್ಥಿತ ಬದಲಾವಣೆ' ತರುವಂತೆಯೂ ಅರ್ಜಿದಾರರು ಕೋರಿದರು. ಅರ್ಜಿದಾರರನ್ನು ಉದ್ದೇಶಿಸಿ, 'ನೀವು ಇದುವರೆಗೆ ಸುಪ್ರೀಂಕೋರ್ಟ್‌ನಲ್ಲಿ ಇಂತಹ ಎಷ್ಟು ಪಿಐಎಲ್‌ ಸಲ್ಲಿಸಿದ್ದೀರಾ' ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ವಕೀಲ ತಿವಾರಿ, '8ರಿಂದ 10' ಎಂದು ಉತ್ತರಿಸಿದರು. ತಕ್ಷಣವೇ ನ್ಯಾಯಪೀಠ, 'ಪಿಐಎಲ್‌ ವಜಾಗೊಳಿಸಲಾಗಿದೆ' ಎಂದು ಪ್ರಕಟಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries