ಪೇಶಾವರ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿನ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದು, ಅರೆಸೈನಿಕ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೋರ್ ಚಪ್ಪೂರ್‌ನಲ್ಲಿರುವ ಪೊಲೀಸ್ ಚೆಕ್‌ಪೋಸ್ಟ್ ವಶಪಡಿಸಿಕೊಳ್ಳುವ ಉದ್ದೇಶದಿಂದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸ್ ಮತ್ತು ಉಗ್ರರ ನಡುವೆ ಎರಡೂವರೆ ಗಂಟೆಗೂ ಅಧಿಕ ಕಾಲ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿಸಿದ್ದಾರೆ.
ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿದ್ದು, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರ ವಿರುದ್ದದ ಹೋರಾಡಿದ ಪೊಲೀಸ್ ಅಧಿಕಾರಿಯ ಬಲಿದಾನವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ರಾಜ್ಯಪಾಲ ಫೈಸಲ್ ಕರೀಮ್ ಹೇಳಿದ್ದಾರೆ.
ಕಳೆದೊಂದು ವರ್ಷದಿಂದ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸೆಪ್ಟೆಂಬರ್ ತಿಂಗಳಲ್ಲೇ 45 ಉಗ್ರ ದಾಳಿಗಳು ಜರುಗಿದ್ದು, 54 ಜನರು ಮೃತಪಟ್ಟಿದ್ದಾರೆ.




