ಪಟ್ನಾ: ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ನೇತೃತ್ವದ ಮೂವರು ಸದಸ್ಯರ ತಂಡ ಅಕ್ಟೋಬರ್ 4ರಂದು ಬಿಹಾರಕ್ಕೆ ಭೇಟಿ ನೀಡಲಿದ್ದು, ಇದೇ ವರ್ಷಾಂತ್ಯದಲ್ಲಿ ನಡೆಯುವ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಿದ್ಧತೆ ಪರಿಶೀಲನೆ ನಡೆಸಲಿದೆ.
ಪ್ರಸ್ತುತ ವಿಧಾನಸಭೆ ಅವಧಿಯು ನವೆಂಬರ್ 22ಕ್ಕೆ ಕೊನೆಗೊಳ್ಳಲಿದೆ.
ಚುನಾವಣಾ ಆಯೋಗದ ತಂಡದ ಬಿಹಾರ ಭೇಟಿಯು ಅಕ್ಟೋಬರ್ 5ರಂದು ಮುಗಿಯುತ್ತಿದ್ದಂತೆ, ಬಹು ನಿರೀಕ್ಷಿತ ಚುನಾವಣಾ ವೇಳಾಪಟ್ಟಿಯನ್ನು ಅಕ್ಟೋಬರ್ ಕೊನೇ ವಾರದಲ್ಲಿ ಕೊನೆಯಾಗುವ ದೀಪಾವಳಿ ಹಾಗೂ ಛತ್ ಉತ್ಸವಗಳನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆ ಇದೆ.
ಚುನಾವಣಾ ಆಯೋಗವು 38 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿತ್ತು. ಮಳೆ ಹಾಗೂ ಹಬ್ಬದ ದಿನಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಸಿದ್ಧತೆಗಳ ಪರಿಶೀಲನೆ ನಡೆಸಿತ್ತು.
ಜುಲೈನಲ್ಲಿ ಆರಂಭಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್‌ಐಆರ್) ಬಳಿಕ ಚುನಾವಣಾ ಆಯೋಗದ ತಂಡ ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿರುವ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಬಿಹಾರದಲ್ಲಿ 7.9 ಕೋಟಿಯಲ್ಲ; 7.42 ಕೋಟಿ ಮತದಾರರಿದ್ದಾರೆ.
ಎಸ್‌ಐಆರ್ ಮೂಲಕ ಸಾಕಷ್ಟು ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳು, ಚುನಾವಣಾ ಆಯೋಗದ ತಂಡವನ್ನು ಭೇಟಿಯಾಗುವ ಸಾಧ್ಯತೆ ಇದೆ. ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರೂ ಜ್ಞಾನೇಶ್ ಕುಮಾರ್ ಅವರೊಂದಿಗೆ ತಂಡದಲ್ಲಿದ್ದಾರೆ.
ಏತನ್ಮಧ್ಯೆ, ಚುನಾವಣಾ ಆಯೋಗವು ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 320 ಐಎಎಸ್ ಅಧಿಕಾರಿಗಳು, 60 ಐಪಿಎಸ್ ಅಧಿಕಾರಿಗಳು ಹಾಗೂ 90 ಮಂದಿ ಇತರ ಅಧಿಕಾರಿಗಳು ಸೇರಿದಂತೆ 470 ವೀಕ್ಷಕರನ್ನು ನಿಯೋಜಿಸಲು ನಿರ್ಧರಿಸಿದೆ.
ಬಿಹಾರದಲ್ಲಿ 2020ರ ವಿಧಾನಸಭೆ ಚುನಾವಣೆಯು ಮೂರು ಹಂತಗಳಲ್ಲಿ ನಡೆದಿತ್ತು.
ಕೋವಿಡ್ ನಂತರ ಚುನಾವಣೆ ನಡೆದ ಮೊದಲ ರಾಜ್ಯ ಎನಿಸಿದ್ದ ಬಿಹಾರ, ಇದೀಗ ಎಸ್‌ಐಆರ್ ಬಳಿಕ ಮತದಾನಕ್ಕೆ ಸಾಕ್ಷಿಯಾಗುತ್ತಿರುವ ಪ್ರಥಮ ರಾಜ್ಯವೂ ಆಗಲಿದೆ.




