ತಿರುವನಂತಪುರಂ: ಕೇಂದ್ರದ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ಕ್ಕೆ ತಿದ್ದುಪಡಿ ಮಸೂದೆ ಅಂಗೀಕರಿಸಿದ ಮೊದಲ ರಾಜ್ಯ ಕೇರಳ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಮಾನವ - ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇರಳ ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಬುಧವಾರ ಅಂಗೀಕರಿಸಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಗುರುವಾರ ಪೋಸ್ಟ್ ಹಂಚಿಕೊಂಡಿರುವ ಸಿಎಂ, 'ಕೇರಳ ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಮಸೂದೆ ಅಂಗೀಕರಿಸಿರುವುದು, ಮಾನವ - ವನ್ಯಜೀವಿ ಸಂಘರ್ಷ ಪರಿಹರಿಸುವ ನಿಟ್ಟಿನಲ್ಲಿ ಹಾಗೂ ಅರಣ್ಯದಂಚಿನ ಸಮುದಾಯಗಳಿಗೆ ನ್ಯಾಯವನ್ನು ಖಾತ್ರಿ ಮಾಡುವ ದಿಕ್ಕಿನಲ್ಲಿ ಇರಿಸಿದ ಮಹತ್ವದ ಹೆಜ್ಜೆಯಾಗಿದೆ' ಎಂದು ಬರೆದುಕೊಂಡಿದ್ದಾರೆ.
'ಮಾನವ, ವನ್ಯಜೀವಿಗಳ ಸುರಕ್ಷತೆಗೆ, ಜನರು ಮತ್ತು ಪ್ರಕೃತಿ ನಡುವಣ ಸಾಮರಸ್ಯ ಕಾಪಾಡಲು ಕೇರಳ ಹೊಂದಿರುವ ಬದ್ಧತೆಯನ್ನು ಈ ಸುಧಾರಣಾ ಕ್ರಮವು ಪುನಃ ಸಾರಿ ಹೇಳುತ್ತದೆ' ಎಂದು ಪ್ರತಿಪಾದಿಸಿದ್ದಾರೆ.
ಈ ಮಸೂದೆಯನ್ನು ರಾಜಭವನಕ್ಕೆ ಕಳುಹಿಸಲಾಗುವುದು. ಇದು, ಕೇಂದ್ರಕ್ಕೆ ಸಂಬಂಧಿಸಿದ್ದಾಗಿರುವುದರಿಂದ ರಾಷ್ಟ್ರಪತಿಯವರಿಗೂ ಕಳಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

