ನೊಬೆಲ್ ಪ್ರಶಸ್ತಿ ಪುರಸ್ಕೃತ ಜೋಸೆಫ್ ಸ್ಟಿಗ್ಲಿಝ್ ನೇತೃತ್ವದಲ್ಲಿ ನಡೆದ ಅಧ್ಯಯನವು,ಜಾಗತಿಕ ಅಸಮಾನತೆಯು ಆತಂಕಕಾರಿ ಮಟ್ಟವನ್ನು ತಲುಪಿದ್ದು, ಪ್ರಜಾಪ್ರಭುತ್ವ,ಆರ್ಥಿಕ ಸ್ಥಿರತೆ ಮತ್ತು ಹವಾಮಾನ ಪ್ರಗತಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಎಚ್ಚರಿಸಿದೆ.
ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ವಿನ್ನಿ ಬ್ಯಾನಿಮಾ ಮತ್ತು ಇಮ್ರಾನ್ ವಲೋದಿಯಾ ಅವರನ್ನೊಳಗೊಂಡ ಜಾಗತಿಕ ಅಸಮಾನತೆ ಕುರಿತು ಸ್ವತಂತ್ರ ತಜ್ಞರ ವಿಶೇಷ ಸಮಿತಿಯು, 2000 ಮತ್ತು 2024ರ ನಡುವೆ ಸೃಷ್ಟಿಯಾದ ಎಲ್ಲ ಹೊಸ ಸಂಪತ್ತಿನ ಶೇ.41ರಷ್ಟು ಜಾಗತಿಕವಾಗಿ ಶೇ.1ರಷ್ಟು ಅಗ್ರ ಶ್ರೀಮಂತರ ವಶದಲ್ಲಿದ್ದರೆ, ಜಾಗತಿಕ ಜನಸಂಖ್ಯೆಯ ತಳಮಟ್ಟದ ಶೇ.50ರಷ್ಟು ಭಾಗವು ಕೇವಲ ಶೇ.1ರಷ್ಟನ್ನು ಪಡೆದಿದೆ ಎನ್ನುವುದನ್ನು ಬಹಿರಂಗಗೊಳಿಸಿದೆ.
ಜಾಗತಿಕ ಜಿಡಿಪಿಯಲ್ಲಿ ಹೆಚ್ಚಿನ ಆದಾಯದ ದೇಶಗಳ ಪಾಲನ್ನು ಸ್ವಲ್ಪಮಟ್ಟಿಗೆ ತಗ್ಗಿಸಿರುವ ಚೀನಾ ಮತ್ತು ಭಾರತದಂತಹ ಹೆಚ್ಚಿನ ಜನಸಂಖ್ಯೆಯ ದೇಶಗಳಲ್ಲಿ ತಲಾದಾಯದಲ್ಲಿ ಏರಿಕೆಯಿಂದಾಗಿ ದೇಶಗಳ ನಡುವಿನ ಅಸಮಾನತೆಯು ಕಡಿಮೆಯಾಗಿರುವಂತಿದೆ ಎಂದು ವರದಿಯು ಹೇಳಿದೆ.
2000 ಮತ್ತು 2023ರ ನಡುವೆ ವಿಶ್ವದ ಅರ್ಧದಷ್ಟು ದೇಶಗಳ ಶೇ.1ರಷ್ಟು ಅಗ್ರ ಶ್ರೀಮಂತರು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದು,ಇದು ಜಾಗತಿಕ ಸಂಪತ್ತಿನ ಶೇ.74ರಷ್ಟು ಆಗಿದೆ. ಇದೇ ಅವಧಿಯಲ್ಲಿ ಭಾರತದ ಶೇ.1ರಷ್ಟು ಅಗ್ರ ಶ್ರೀಮಂತರು ತಮ್ಮ ಸಂಪತ್ತನ್ನು ಶೇ.62ರಷ್ಟು ಹೆಚ್ಚಿಸಿಕೊಂಡಿದ್ದರೆ,ಚೀನಾದಲ್ಲಿ ಇದು ಶೇ.54ರಷ್ಟಿದೆ ಎಂದು ವರದಿಯು ತಿಳಿಸಿದೆ.
ತೀವ್ರ ಅಸಮಾನತೆಯು ಒಂದು ಆಯ್ಕೆಯಾಗಿದೆ. ಅದು ಅನಿವಾರ್ಯವಲ್ಲ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ ಅದನ್ನು ತಗ್ಗಿಸಬಹುದು. ಜಾಗತಿಕ ಸಮನ್ವಯದಿಂದ ಇದನ್ನು ಹೆಚ್ಚು ಸುಗಮಗೊಳಿಸಬಹುದು ಮತ್ತು ಈ ನಿಟ್ಟಿನಲ್ಲಿ ಜಿ20 ಪ್ರಮುಖ ಪಾತ್ರವನ್ನು ಹೊಂದಿದೆ ಎಂದು ಹೇಳಿರುವ ವರದಿಯು,ಜಾಗತಿಕ ಪ್ರವೃತ್ತಿಗಳ ಮೇಲೆ ನಿಗಾಯಿರಿಸಲು ಮತ್ತು ನೀತಿ ನಿರೂಪಣೆಗೆ ಮಾರ್ಗದರ್ಶನ ನೀಡಲು ಹವಾಮಾನ ಬದಲಾವಣೆ ಕುರಿತು ಅಂತರಸರಕಾರಿ ಸಮಿತಿಯ ಮಾದರಿಯಲ್ಲಿ ಅಸಮಾನತೆ ಕುರಿತು ಅಂತರರಾಷ್ಟ್ರೀಯ ಸಮಿತಿಯ ರಚನೆಯನ್ನು ಪ್ರಸ್ತಾವಿಸಿದೆ.
ದಕ್ಷಿಣ ಆಫ್ರಿಕಾದ ಜಿ20 ಅಧ್ಯಕ್ಷತೆಯಡಿ ಅಸ್ತಿತ್ವಕ್ಕೆ ಬರಲಿರುವ ಈ ಸಮಿತಿಯು ಅಸಮಾನತೆ ಮತ್ತು ಅದಕ್ಕೆ ಕಾರಣಗಳ ಕುರಿತು ಸರಕಾರಗಳಿಗೆ ಅಧಿಕೃತ ದತ್ತಾಂಶಗಳನ್ನು ಒದಗಿಸಲಿದೆ.
ಹೆಚ್ಚು ಸಮಾನ ದೇಶಗಳಿಗೆ ಹೋಲಿಸಿದರೆ ಹೆಚ್ಚಿನ ಅಸಮಾನತೆಯನ್ನು ಹೊಂದಿರುವ ದೇಶಗಳು ಪ್ರಜಾಪ್ರಭುತ್ವದ ಕುಸಿತವನ್ನು ಅನುಭವಿಸುವ ಸಾಧ್ಯತೆ ಏಳು ಪಟ್ಟು ಹೆಚ್ಚು ಎಂದೂ ವರದಿಯು ಹೇಳಿದೆ.




