ಇಸ್ಲಾಮಾಬಾದ್: ಇಲ್ಲಿಯ ಜಿಲ್ಲಾ ನ್ಯಾಯಾಲಯದ ಹೊರಗೆ ಪೊಲೀಸ್ ವಾಹನದ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 27 ಜನ ಗಾಯಗೊಂಡಿದ್ದಾರೆ ಎಂದು ಆಂತರಿಕ ವ್ಯವಹಾರಗಳ ಸಚಿವ ಮೊಹಸಿನ್ ನಖ್ವಿ ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದ ನಖ್ವಿ, 'ದಾಳಿಕೋರ ನ್ಯಾಯಾಲಯದ ಒಳಗೆ ನುಗ್ಗಲು ಯತ್ನಿಸಿದ್ದ.
ಆದರೆ ಸಾಧ್ಯವಾಗಲಿಲ್ಲ, ಹೀಗಾಗಿ ಮಧ್ಯಾಹ್ನ 12.39ರ (ಸ್ಥಳೀಯ ಕಾಲಮಾನ) ಹೊತ್ತಿಗೆ ಕೋರ್ಟ್ ಕಟ್ಟಡದ ಗೇಟ್ 11ರ ಪ್ರದೇಶದಲ್ಲಿ ಪೊಲೀಸ್ ವಾಹನದ ಬಳಿ ಸ್ಫೋಟಿಸಿಕೊಂಡಿದ್ದಾನೆ. ಘಟನೆಯಲ್ಲಿ ಭದ್ರತಾ ಸಿಬ್ಬಂದಿ, ವಕೀಲರು ಸೇರಿ 12 ಮಂದಿ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
'ಯಾವುದೇ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ಈ ರೀತಿಯ ದಾಳಿಯನ್ನು ಸಾಮಾನ್ಯವಾಗಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಮಾಡುತ್ತದೆ' ಎಂದು ಅವರು ಹೇಳಿದ್ದಾರೆ.
ದಾಳಿ ನಡೆಸಿದವರು ಯಾರು ಎನ್ನುವುದನ್ನು ಪತ್ತೆ ಮಾಡುತ್ತೇವೆ ಎಂದಿರುವ ನಖ್ವಿ, 'ಈ ಸ್ಫೋಟವನ್ನು ಹಲವು ಅಂಶಗಳೊಂದಿಗೆ ಹೋಲಿಕೆ ಮಾಡುತ್ತಿದ್ದೇವೆ. ಇಂತಹ ಘಟನೆಗಳ ನಂತರ ಭಾರತದವರು ದೂರುವಂತೆ ತಕ್ಷಣಕ್ಕೆ ನಾವು ಏನನ್ನೂ ಹೇಳುವುದಿಲ್ಲ. ಪೂರ್ಣ ವಿವರ, ಪುರಾವೆ ಪಡೆದು ಮಾಹಿತಿ ನೀಡುತ್ತೇವೆ' ಎಂದಿದ್ದಾರೆ.
'ಅಫ್ಗಾನಿಸ್ತಾನ ತನ್ನ ನೆಲದಿಂದ ನಡೆಯುವ ಭಯೋತ್ಪಾದನೆಯನ್ನು ನಿಲ್ಲಿಸಬೇಕು ಎಂಬುದು ಪಾಕಿಸ್ತಾನದ ಸ್ಪಷ್ಟ ನಿಲುವಾಗಿದೆ, ಇಲ್ಲದಿದ್ದರೆ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದಿದ್ದಾರೆ.




