ವಾರಣಾಸಿ: ಕೊಡೈನ್ ಹೊಂದಿರುವ ಕೆಮ್ಮಿನ ಸಿರಪ್ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ವಾರಣಾಸಿಯ ಮತ್ತೆ 12 ಔಷಧ ಕಂಪೆನಿಗಳ ವಿರುದ್ಧ ಉತ್ತರಪ್ರದೇಶ ಸರಕಾರದ ಆಹಾರ ಮತ್ತು ಔಷಧಗಳ ಇಲಾಖೆ ಪ್ರಕರಣ ದಾಖಲಿಸಿದೆ.
ಈ ಹಿಂದೆ ಆಹಾರ ಮತ್ತು ಔಷಧಗಳ ಇಲಾಖೆ 26 ಔಷದ ಕಂಪೆನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.
ನವೆಂಬರ್ 15ರಂದು 26 ಕಂಪೆನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಹಾರ ಮತ್ತು ಔಷಧಗಳ ಇಲಾಖೆಯ ಇನ್ಸ್‌ಪೆಕ್ಟರ್ ಜನಾಬ್ ಅಲಿ ಅವರು ಶುಕ್ರವಾರ ಹೇಳಿದ್ದಾರೆ. ಇದೇ ಸಂದರ್ಭ 12 ಶಂಕಿತ ಕಂಪೆನಿಗಳು ಕೂಡ ಪತ್ತೆಯಾದವು ಎಂದು ಅವರು ತಿಳಿಸಿದ್ದಾರೆ.
ಈ 12 ಕಂಪೆನಿಗಳ ಬಗ್ಗೆ ತನಿಖೆ ನಡೆಸಲು ತಂಡವೊಂದು ತೆರಳಿದಾಗ, ಆ ಕಂಪೆನಿಗಳು ಮುಚ್ಚಿರುವುದು ಅಥವಾ ಅದೇ ವಿಳಾಸದಲ್ಲಿ ಇತರ ಅಂಗಡಿಗಳು ಕಾರ್ಯಾಚರಿಸುತ್ತಿರುವುದು ಕಂಡು ಬಂದಿದೆ ಎಂದು ಅಲಿ ಹೇಳಿದ್ದಾರೆ.
ಈ ಔಷಧ ಕಂಪೆನಿಗಳ ಮಾಲಕರಿಗೆ ನೋಟಿಸು ಜಾರಿ ಮಾಡಲಾಗಿದೆ ಹಾಗೂ ಸ್ಪಷ್ಟನೆ ಕೇಳಲಾಗಿದೆ. ಈ ಕಂಪೆನಿಗಳ ಮಾಲಕರು ಪ್ರತಿಕ್ರಿಯೆ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಯಿತು ಎಂದು ಅಲಿ ತಿಳಿಸಿದ್ದಾರೆ.




