ಚೆನ್ನೈ: ದಿತ್ವಾ ಚಂಡಮಾರುತ ಅಬ್ಬರಿಸುತ್ತಿದ್ದು, ಚೆನ್ನೈ ನಗರ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಂಜೆ ಭಾರೀ ಮಳೆಯಾಗಿದೆ. ಚಂಡಮಾರುತದಿಂದ ಉಂಟಾಗುವ ಯಾವುದೇ ಅನಾಹುತಗಳನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಂಡಿರುವುದಾಗಿ ತಮಿಳುನಾಡು ಸರಕಾರವು ಪ್ರಕಟಿಸಿದೆ.
ದಿತ್ವಾ ಚಂಡಮಾರುತವು ಕಾವೇರಿ ಮುಖಜ ಜಿಲ್ಲೆಗಳಲ್ಲಿ ಮತ್ತು ರಾಮನಾಥಪುರಂ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯನ್ನು ಸುರಿಸಿದೆ. ಉತ್ತರ ತಮಿಳುನಾಡು,ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶ ಕರಾವಳಿಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ದಿತ್ವಾ ಕಳೆದ ಆರು ಗಂಟೆಗಳಲ್ಲಿ ಪ್ರತಿ ಗಂಟೆಗೆ 10 ಕಿ.ಮೀ.ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದ್ದು,ಶನಿವಾರ ಅಪರಾಹ್ನ 2:30 ಗಂಟೆಗೆ ಅದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಚಂಡಮಾರುತವು ರವಿವಾರ ನಸುಕಿನ ವೇಳೆಗೆ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ನೆರೆಯ ದಕ್ಷಿಣ ಆಂಧ್ರಪ್ರದೇಶಗಳ ಕರಾವಳಿಗಳ ಸಮೀಪ ಬಂಗಾಳ ಕೊಲ್ಲಿಯ ನೈಋತ್ಯ ಭಾಗವನ್ನು ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಹೇಳಿಕೆಯಲ್ಲಿ ತಿಳಿಸಿದೆ.
ಅಧಿಕಾರಿಗಳು ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ತಗ್ಗು ಪ್ರದೇಶಗಳಲ್ಲಿಯ ಜನರನ್ನು ಸ್ಥಳಾಂತರಿಸಲು ಸಿದ್ಧತೆಗಳು ನಡೆಯುತ್ತಿದ್ದು,ವಿಪತ್ತು ನಿರ್ವಹಣಾ ತಂಡಗಳು ಕಟ್ಟೆಚ್ಚರವನ್ನು ವಹಿಸಿವೆ.
ಈ ನಡುವೆ ರಾಮನಾಥಪುರಂ ಜಿಲ್ಲೆಯಲ್ಲಿ ಕಾಲುವೆ ಬಳಿಯ ಪ್ರದೇಶದಲ್ಲಿ ಟೂರಿಸ್ಟ್ ವ್ಯಾನ್ ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅದರಲ್ಲಿದ್ದವರು ಹಿಂದಿನ ಬಾಗಿಲಿನಿಂದ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ.
ಬಲವಾಗಿ ಬೀಸುತ್ತಿರುವ ಬಿರುಗಾಳಿ ಮತ್ತು ಭಾರೀ ಮಳೆಯ ಹಿನ್ನೆಲೆಯಲ್ಲಿ ಅನಗತ್ಯವಾಗಿ ಹೊರಹೋಗದಂತೆ ಜಿಲ್ಲಾಡಳಿತವು ಜನರಿಗೆ ಎಚ್ಚರಿಕೆ ನೀಡಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ,ಶ್ರೀಲಂಕಾದ ತಲೈಮನ್ನಾರ್‌ನ ಪಶ್ಚಿಮದಲ್ಲಿರುವ ಪಾಂಬನ್ ದ್ವೀಪದ ದಕ್ಷಿಣ ತುದಿಯಲ್ಲಿನ ಧನುಷ್ಕೋಡಿಗೆ ಭೇಟಿ ನೀಡದಂತೆ ಪ್ರವಾಸಿಗಳಿಗೆ ಸೂಚಿಸಲಾಗಿದೆ.
ತಂಜಾವೂರು,ನಾಗಪಟ್ಟಣಂ,ಮೈಲಾದುತುರೈ,ಕುಂಭಕೋಣಂ ಮತ್ತು ಚೆನ್ನೈ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಭಾರೀ ಮಳೆಯಾಗಿದೆ.
ರಾಜ್ಯಾದ್ಯಂತ ಸುಮಾರು 6,000 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ತಮಿಳುನಾಡಿನ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ತಿಳಿಸಿದ್ದಾರೆ.
ದಿತ್ವಾ ಚಂಡಮಾರುತದ ಹಿನ್ನೆಲೆಯಲ್ಲಿ ಕುಡ್ಡಲೂರು ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಎಂಆರ್‌ಕೆ ಪನ್ನೀರ್‌ಸೆಲ್ವಂ ಅವರು ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ದಿತ್ವಾ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಒಟ್ಟು 54 ವಿಮಾನಯಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು.
ಪರಿಸ್ಥಿತಿ ಹದಗೆಡುತ್ತಿದ್ದಂತೆ ಚೆನ್ನೈ,ಮಧುರೈ,ತಿರುಚ್ಚಿ, ತೂತ್ತುಕುಡಿ ಮತ್ತು ಸಮೀಪದ ವಿಮಾನ ನಿಲ್ದಾಣಗಳಿಂದ ಎಲ್ಲ ಸಣ್ಣ ವಿಮಾನಗಳ ಕಾರ್ಯಾಚರಣೆಗಳನ್ನು ರವಿವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಈ ನಡುವೆ, ಶ್ರೀಲಂಕಾ ಮೂಲಕ ದುಬೈನಿಂದ ಭಾರತಕ್ಕೆ ಆಗಮಿಸುತ್ತಿದ್ದ 150 ತಮಿಳರು ಸೇರಿದಂತೆ ಸುಮಾರು 300 ಪ್ರಯಾಣಿಕರು ಚೆನ್ನೆಗೆ ಹಲವಾರು ವಿಮಾನಯಾನಗಳನ್ನು ರದ್ದುಗೊಳಿಸಿರುವುದರಿಂದ ಕಳೆದ ಮೂರು ದಿನಗಳಿಂದ ಕೋಲಂಬೊದ ಬಂಡಾರನಾಯಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಂತ್ರರಾಗಿದ್ದಾರೆ.
ಚಂಡಮಾರುತದ 'ದಿತ್ವಾ' ಹೆಸರನ್ನು ಯೆಮನ್ ನೀಡಿದೆ.




