HEALTH TIPS

ರಾಜಸ್ಥಾನ ಎಸ್‌ಐಆರ್‌| 24 ಲಕ್ಷ ಮತದಾರರ ಹೆಸರು ಅಳಿಸಿಹೋಗುವ ಸಾಧ್ಯತೆ!

ಜೈಪುರ: ರಾಜಸ್ಥಾನದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ರಾಜ್ಯದ 24 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಅಳಿಸಿಹೋಗುವ ಆತಂಕ ಎದುರಾಗಿದೆ. ನ.4ರಂದು ಆರಂಭವಾದ ಈ ಪರಿಶೀಲನೆ ಡಿ. 4ರಂದು ಮುಕ್ತಾಯಗೊಳ್ಳಲಿದೆ.

ಚುನಾವಣಾ ಆಯೋಗದ ನಿರ್ದೇಶನದಂತೆ, ಪ್ರಸ್ತುತ ಮತದಾರರ ಹೆಸರುಗಳನ್ನು 2002ರಲ್ಲಿ ನಡೆದ ಕೊನೆಯ SIR ಪ್ರಕ್ರಿಯೆಯಲ್ಲಿ ಸಿದ್ಧಪಡಿಸಿದ ಪಟ್ಟಿಯೊಂದಿಗೆ ಹೋಲಿಸಲಾಗುತ್ತಿದೆ. ಹೊಂದಾಣಿಕೆಯಾಗದ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.

ಮುಖ್ಯ ಚುನಾವಣಾ ಅಧಿಕಾರಿ ನವೀನ್ ಮಹಾಜನ್ ಮಾತನಾಡಿ, "ಡಿಜಿಟಲೀಕರಣದ ನಂತರ ಪ್ರತಿಯೊಬ್ಬ ಮತದಾರರ ಮಾಹಿತಿಯನ್ನು 2002ರ ಪಟ್ಟಿಯೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಮತದಾರರ ಪೋಷಕರ ಹೆಸರುಗಳು ಆ ಪಟ್ಟಿಯಲ್ಲಿ ದಾಖಲಾಗಿರುವುದನ್ನು ಪರಿಶೀಲಿಸಲಾಗುತ್ತಿದೆ," ಎಂದು ಮಾಹಿತಿ ನೀಡಿದರು.

ಡಿ. 9ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ 2002ರ ಪಟ್ಟಿಗೆ ಹೊಂದಾಣಿಕೆ ಆಗದ ಮತದಾರರಿಗೆ ನೋಟಿಸ್ ನೀಡಲಾಗುವುದು. ಅವರು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ನಿಗದಿತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅದರಲ್ಲಿ ವಿಫಲರಾದರೆ ಅವರ ಹೆಸರುಗಳನ್ನು ಅಳಿಸಲಾಗುತ್ತದೆ.

ಬಿಹಾರ ಚುನಾವಣೆಯ ನಂತರ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಗೊಂಡ SIR ಪ್ರಕ್ರಿಯೆಯ ಅಂಗವಾಗಿ ಮೊದಲ ಕರಡು ಪಟ್ಟಿ ಡಿ. 4ರಂದು ಬಿಡುಗಡೆಯಾಗಲಿದೆ. ಮತದಾರರು ಮತ್ತು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರಿಗೆ ಆಕ್ಷೇಪಣೆ ಮತ್ತು ಹಕ್ಕುಗಳಿಗಾಗಿ ಒಂದು ತಿಂಗಳು ಅವಧಿ ನೀಡಲಾಗುತ್ತದೆ. ಅಂತಿಮ ಪಟ್ಟಿಯನ್ನು ಫೆಬ್ರವರಿ 7, 2026ರಂದು ಘೋಷಿಸಲಾಗುವುದು.

ರಾಜಸ್ಥಾನದಲ್ಲಿ ಒಟ್ಟು 5.46 ಕೋಟಿ ಮತದಾರರಿದ್ದು, ಮನೆ-ಮನೆ ಸಮೀಕ್ಷೆಯ ವೇಳೆ ಅವರಿಗೆ ಎಣಿಕೆ ನಮೂನೆಗಳನ್ನು ವಿತರಿಸಲಾಗಿದೆ. BLOಗಳು ಈಗಾಗಲೇ 4.59 ಕೋಟಿ ನಮೂನೆಗಳನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸಿದ್ದಾರೆ.

ನವೆಂಬರ್ 28ರ SIR ಅಂಕಿಅಂಶಗಳ ಪ್ರಕಾರ 4,34,77,808 ಹೆಸರುಗಳು 2002ರ ಪಟ್ಟಿಯೊಂದಿಗೆ ಯಶಸ್ವಿಯಾಗಿ ಹೊಂದಾಣಿಕೆಯಾಗಿದೆ. 24,41,673 ಹೆಸರುಗಳು ಇನ್ನೂ ಹೊಂದಾಣಿಕೆಯಾಗಿಲ್ಲ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ.

ಜೈಪುರದಲ್ಲಿ 1,95,489 ಹೆಸರುಗಳು, ಜೋಧಪುರದಲ್ಲಿ 1,47,016, ಭಿಲ್ವಾರಾದಲ್ಲಿ 1,29,574, ಸಿಕಾರ್‌ನಲ್ಲಿ 1,15,713, ಬಿಕಾನೇರ್‌ನಲ್ಲಿ 1,11,744 ಮತ್ತು ಉದಯಪುರದಲ್ಲಿ 1,03,286 ಹೆಸರುಗಳು ಇನ್ನೂ ಹೊಂದಾಣಿಕೆಯಾಬೇಕಿದೆ. ಈ ಜಿಲ್ಲೆಗಳಲ್ಲಿ ಮ್ಯಾಪಿಂಗ್ ಕಾರ್ಯ ಇನ್ನೂ ತೀವ್ರಗತಿಯಲ್ಲಿದೆ.

ಮ್ಯಾಪಿಂಗ್ ಹೇಗೆ ನಡೆಯುತ್ತದೆ?:

ರಾಜ್ಯದಲ್ಲಿ 52,222 BLOಗಳು ಮನೆ-ಮನೆಗೆ ತೆರಳಿ ಮತದಾರರಿಗೆ ಎಣಿಕೆ ನಮೂನೆಗಳನ್ನು ನೀಡುತ್ತಿದ್ದಾರೆ. ಮತದಾರರು ಹೆಸರು, ವಿಳಾಸ, EPIC ಸಂಖ್ಯೆ ಮೊದಲಾದ ವಿವರಗಳನ್ನು ಭರ್ತಿ ಮಾಡುತ್ತಾರೆ. BLOಗಳು ನಂತರ ಮಾಹಿತಿಯನ್ನು ಡಿಜಿಟಲ್ ವೇದಿಕೆಗೆ ಅಪ್‌ಲೋಡ್ ಮಾಡುತ್ತಾರೆ. ಅಲ್ಲಿ ಸ್ವಯಂಚಾಲಿತವಾಗಿ 2002ರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತದೆ.

ಇತರ ರಾಜ್ಯಗಳಿಂದ ವಲಸೆ ಬಂದ ಮತದಾರರ ಹೆಸರುಗಳನ್ನು ಅವರ ಮೂಲ ರಾಜ್ಯಗಳ 2002-2005ರ ಮತದಾರರ ಪಟ್ಟಿಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.

ಹೊಂದಾಣಿಕೆ ಯಶಸ್ವಿಯಾದರೆ ಯಾವುದೇ ಹೆಚ್ಚುವರಿ ದಾಖಲೆ ಅಗತ್ಯವಿಲ್ಲ. ವಿಫಲವಾದರೆ ಆಕ್ಷೇಪಣೆ ಅವಧಿಯಲ್ಲಿ ದಾಖಲೆ ಸಲ್ಲಿಕೆ ಕಡ್ಡಾಯವಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries