ಬ್ಯಾಂಕಾಕ್: ದಕ್ಷಿಣ ಥೈಲ್ಯಾಂಡ್ ನ 12 ಪ್ರಾಂತಗಳಲ್ಲಿ ನಿರಂತರ ಸುರಿದ ಧಾರಾಕಾರ ಮಳೆಯಿಂದ ಸೃಷ್ಟಿಯಾದ ಪ್ರವಾಹ ವ್ಯಾಪಕ ನಾಶ-ನಷ್ಟ ಉಂಟು ಮಾಡಿದ್ದು ಕನಿಷ್ಠ 145 ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ದಕ್ಷಿಣ ಥೈಲ್ಯಾಂಡ್ ನ ಅತೀ ದೊಡ್ಡ ನಗರ ಹ್ಯಾತ್ ಯಾಯಿಯನ್ನು ಒಳಗೊಂಡಿರುವ ಸೋಂಗ್‍ಕ್ಲಾ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇಲ್ಲಿ ಅತ್ಯಧಿಕ ಸಾವು ಸಂಭವಿಸಿದ್ದು ಶುಕ್ರವಾರ ಬೆಳಗ್ಗಿನವರೆಗಿನ ಮಾಹಿತಿಯಂತೆ 110 ಮೃತದೇಹ ಪತ್ತೆಯಾಗಿದೆ. ಈ ಪ್ರಾಂತದ ಬಹುತೇಕ ಜನವಸತಿ ಪ್ರದೇಶಗಳು ಮುಳುಗಡೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗಿದೆ. ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ 1.2 ದಶಲಕ್ಷಕ್ಕೂ ಹೆಚ್ಚು ಕುಟುಂಬಗಳು ಮತ್ತು 3.6 ದಶಲಕ್ಷ ಜನರು ಪ್ರಭಾವಿತರಾಗಿದ್ದು ಕಡಿಮೆ ಎತ್ತರದ ಕಟ್ಟಡಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಪ್ರವಾಹದ ನೀರು ತುಂಬಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ವಿಪತ್ತು ತಡೆ ಮತ್ತು ನಿರ್ವಹಣೆ ಇಲಾಖೆಯ ಅಧಿಕಾರಿಗಳನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ಶುಕ್ರವಾರ ವರದಿ ಮಾಡಿದೆ.
ನಖೋನ್ ಸಿ ಥಮರಟ್, ಪಥಲುಂಗ್, ಸೊಂಗ್‍ಕ್ಲಾ, ಟ್ರಾಂಗ್, ಸಟುನ್, ಪಟ್ಟಾನಿ ಮತ್ತು ಯಾಲ ಪ್ರಾಂತಗಳಲ್ಲಿ ವ್ಯಾಪಕ ಹಾನಿಯಾಗಿದೆ. ದ್ವೀಪದಂತೆ ಕಾಣುತ್ತಿರುವ ನಗರಗಳಲ್ಲಿ ಸಾವಿರಾರು ಜನರು ಸಿಲುಕಿದ್ದು ವಿದ್ಯುತ್ ಮತ್ತು ನೀರು ಪೂರೈಕೆ ಮೊಟಕುಗೊಂಡಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಯೋಧರು, ಸ್ವಯಂ ಸೇವಕರು ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿ ನೆರವಾಗುತ್ತಿದ್ದಾರೆ. ಥೈಲ್ಯಾಂಡ್ ಮಿಲಿಟರಿ 200 ದೋಣಿಗಳು, 20 ಹೆಲಿಕಾಪ್ಟರ್ ಗಳು ಹಾಗೂ ವಿಮಾನವಾಹಕ ನೌಕೆಯ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ ಎಂದು ವರದಿಯಾಗಿದೆ.




