HEALTH TIPS

ಒಂಭತ್ತು ತಿಂಗಳ ಬಳಿಕ ಇಸ್ರೇಲ್ ಜೈಲಿನಿಂದ ಫೆಲೆಸ್ತೀನ್ ಮೂಲದ ಅಮೆರಿಕದ ಬಾಲಕನ ಬಿಡುಗಡೆ

ವಾಷಿಂಗ್ಟನ್/ರಮಲ್ಲಾ: ಒಂಭತ್ತು ತಿಂಗಳಿನಿಂದ ಇಸ್ರೇಲ್ ನ ಜೈಲಿನಲ್ಲಿದ್ದ ಫೆಲೆಸ್ತೀನ್ ಮೂಲದ ಅಮೆರಿಕದ ಬಾಲಕ ಮುಹಮ್ಮದ್ ಇಬ್ರಾಹಿಂ (16) ಅವರನ್ನು ಇಸ್ರೇಲ್ ನ ಅಧಿಕಾರಿಗಳು ಗುರುವಾರ ಬಿಡುಗಡೆ ಮಾಡಿದ್ದಾರೆ.

ಬಂಧನದಿಂದಾಗಿ ಬಾಲಕನ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ, ಅಮೆರಿಕದ ಕಾಂಗ್ರೆಸ್ ಸದಸ್ಯರು ಮತ್ತು ಮಾನವಹಕ್ಕು ಸಂಘಟನೆಗಳಿಂದ ನಡೆದ ಅಭಿಯಾನದ ಪರಿಣಾಮ ಬಾಲಕನ ಬಿಡುಗಡೆ ಮಾಡಲಾಗಿದೆ ಎಂದು Aljazeera.com ವರದಿ ಮಾಡಿದೆ.

ಫ್ಲೋರಿಡಾ ಮೂಲದ ಮುಹಮ್ಮದ್ ಇಬ್ರಾಹಿಂ ಅವರನ್ನು ಫೆಬ್ರವರಿಯಲ್ಲಿ ರಮಲ್ಲಾ ಬಳಿಯ ಅಲ್-ಮಜ್ರಾ ಅಶ್-ಶಾರ್ಕಿಯಾ ಪಟ್ಟಣದಲ್ಲಿರುವ ಅವರ ಕುಟುಂಬದ ಮನೆಯಲ್ಲಿ ದಾಳಿ ಮಾಡಿ ಬಂಧಿಸಲಾಗಿತ್ತು. ಆ ವೇಳೆ ಅವರಿಗೆ 15 ವರ್ಷ ವಯಸ್ಸಾಗಿತ್ತು. ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿರುವ ಇಸ್ರೇಲ್ ನ ಪ್ರಜೆಗಳ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಬಾಲಕ ಮುಹಮ್ಮದ್ ಮೇಲೆ ಆರೋಪಿಸಲಾಗಿತ್ತು. ಆದರೆ ಈ ಆರೋಪವನ್ನು ಮುಹಮ್ಮದ್ ನಿರಾಕರಿಸಿದ್ದರು. ದಾಳಿಯ ವೇಳೆ, ಇಸ್ರೇಲ್ ಸೈನಿಕರು ಮುಹಮ್ಮದ್ ಇಬ್ರಾಹಿಂ ಕಣ್ಣಿಗೆ ಬಟ್ಟೆ ಕಟ್ಟಿ ಥಳಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದರು.

ಬಂಧನದ ಅವಧಿಯಲ್ಲಿ ಕುಟುಂಬಕ್ಕೆ ಮುಹಮ್ಮದ್ ಇಬ್ರಾಹಿಂ ಅವರನ್ನು ಭೇಟಿ ಮಾಡಲು ಅವಕಾಶ ನೀಡದೆ, ಹೊರ ಜಗತ್ತಿನ ಸಂಪರ್ಕವನ್ನೂ ಸಂಪೂರ್ಣವಾಗಿ ಕಡಿತಗೊಳಿಸಲಾಗಿತ್ತು. ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳು ನೀಡುತ್ತಿದ್ದ ಮಾಹಿತಿಯೇ ಕುಟುಂಬಕ್ಕೆ ಲಭ್ಯವಾಗುತ್ತಿದ್ದ ಮಾಹಿತಿಯ ಮೂಲವಾಗಿತ್ತು.

ಜೈಲಿನಲ್ಲಿರುವ ಅವಧಿಯಲ್ಲಿ ಮುಹಮ್ಮದ್ ಇಬ್ರಾಹಿಂ 16ನೇ ವರ್ಷಕ್ಕೆ ಕಾಲಿಟ್ಟಿದ್ದರು. ತೀವ್ರ ತೂಕ ಇಳಿಸಿಕೊಂಡು, ಚರ್ಮದ ಸೋಂಕಿಗೂ ಒಳಗಾಗಿದ್ದರು ಎಂದು ವೈದ್ಯಕೀಯ ವರದಿಗಳು ಹೇಳಿವೆ. ಅವರ ಆರೋಗ್ಯ ಹದಗೆಟ್ಟಿರುವ ಮಾಹಿತಿ ಹೊರಬಿದ್ದ ನಂತರ ಅಮೆರಿಕದ ಕಾಂಗ್ರೆಸ್ ಸದಸ್ಯರು ಬಿಡುಗಡೆಗಾಗಿ ಮಧ್ಯಪ್ರವೇಶಿಸುವಂತೆ ಟ್ರಂಪ್ ಆಡಳಿತಕ್ಕೆ ಮನವಿ ಮಾಡಿದ್ದರು.

ಕಳೆದ ತಿಂಗಳು 27 ಮಂದಿ ಅಮೆರಿಕದ ಕಾಂಗ್ರೆಸ್ ಸದಸ್ಯರು ಈ ಸಂಬಂಧ ಪತ್ರ ಬರೆದಿದ್ದರು. ಡೆಮಾಕ್ರಟಿಕ್ ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ ಸೇರಿದಂತೆ ಹಲವರು ಪ್ರಕರಣದ ಬಗ್ಗೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು.

"ಮುಹಮ್ಮದ್ ಇಬ್ರಾಹಿಂ ನಮ್ಮ ಮಡಿಲಲ್ಲಿ ಸುರಕ್ಷಿತವಾಗಿರುವುದನ್ನು ನೋಡಿದ ಕ್ಷಣವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ಒಂಭತ್ತು ತಿಂಗಳ ದೀರ್ಘ ಅವಧಿಯಲ್ಲಿ ಆತನ ಪೋಷಕರು ಪ್ರತಿಯೊಂದು ಕ್ಷಣವನ್ನು ಭೀತಿಯಲ್ಲೇ ಕಳೆದರು. ಯಾವ ಕುಟುಂಬವೂ, ಯಾವ ಮಗುವೂ ಮುಹಮ್ಮದ್ ಅನುಭವಿಸಿದ ನೋವು ಅನುಭವಿಸಬಾರದು" ಎಂದು ಬಾಲಕನ ಚಿಕ್ಕಪ್ಪ ಜೆಯಾದ್ ಕಡೂರ್ ಭಾವನಾತ್ಮಕವಾಗಿ ಹೇಳಿದರು.

ಬಿಡುಗಡೆಯಾದ ಬಳಿಕ ಕುಟುಂಬವು ತಾಯಿ ಮುನಾ ತಯಾರಿಸಿದ ನೆಚ್ಚಿನ ಊಟದೊಂದಿಗೆ ಮುಹಮ್ಮದ್ ಅವರ 16ನೇ ಹುಟ್ಟುಹಬ್ಬವನ್ನು ತಡವಾಗಿ ಆಚರಿಸಲು ಸಿದ್ಧತೆ ನಡೆಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries