HEALTH TIPS

ಜಿಡಿಪಿ ಪ್ರಗತಿ: ಭಾರತ ದಾಖಲೆ; ಮೊದಲಾರ್ಧದಲ್ಲೇ ವಾರ್ಷಿಕ ಗುರಿ ಮೀರಿ ಸಾಧನೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತದಿಂದ ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿದ್ದು, ಇದರಿಂದ ದೇಶದ ಒಟ್ಟಾರೆ ಆಂತರಿಕ ಉತ್ಪನ್ನವು (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್‌) ದಾಖಲೆ ಪ್ರಮಾಣದಲ್ಲಿ ಶೇ 8.2ಕ್ಕೆ ಏರಿಕೆಯಾಗಿದೆ.

ಎರಡನೆಯ ತ್ರೈಮಾಸಿಕದ ಜಿಡಿಪಿ ದರವು ಕಳೆದ ಆರು ತ್ರೈಮಾಸಿಕಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ. ನಿರೀಕ್ಷೆಗೂ ಮೀರಿದ ಪ್ರಗತಿಯ ಮೂಲಕ ಭಾರತವು, ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ. ಚೀನಾವು ಎರಡನೆಯ ತ್ರೈಮಾಸಿಕದಲ್ಲಿ ಶೇ 4.8ರಷ್ಟು ಜಿಡಿಪಿ ಪ್ರಗತಿ ದಾಖಲಿಸಿದೆ.

ರಾಷ್ಟ್ರೀಯ ಅಂಕಿಅಂಶಗಳ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶದಂತೆ, ವಾರ್ಷಿಕ ಗುರಿಯನ್ನು ಮೀರಿ, ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿಯೇ ಜಿಡಿಪಿ ಶೇ 8ರ ಗಡಿ ದಾಟಿದೆ. ಇದಕ್ಕೂ ಮುನ್ನ 2023-24ನೇ ಸಾಲಿನ ನಾಲ್ಕನೆಯ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್‌) ಭಾರತವು 8.4ರಷ್ಟು ಜಿಡಿಪಿ ಪ್ರಗತಿ ದಾಖಲಾಗಿತ್ತು.

ಜಿಎಸ್‌ಟಿ ಕಡಿತದಿಂದ ಜನರು ಸರಕುಗಳನ್ನು ಖರೀದಿಸುವುದು ಹೆಚ್ಚಿದ್ದು, ಕೈಗಾರಿಕೆ, ತಯಾರಿಕೆ, ಸೇವಾ ವಲಯಗಳಲ್ಲಿ ಪ್ರಗತಿ ಕಂಡುಬಂದಿದೆ. ಇದರಿಂದ ಭಾರತದ ಆರ್ಥಿಕತೆ ನಿರೀಕ್ಷೆ ಮೀರಿ ಬೆಳವಣಿಗೆ ಕಾಣುತ್ತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌-ಜೂನ್‌) ಶೇ 7.8ರಷ್ಟು ಜಿಡಿಪಿ ದಾಖಲಾಗಿತ್ತು. ಕಳೆದ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಇದು ಶೇ 5.6ರಷ್ಟು ಇತ್ತು.

ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ತಯಾರಿಕಾ ವಲಯವು ಶೇ 9.1ರಷ್ಟು ದಾಖಲೆಯ ಪ್ರಗತಿ ಕಂಡಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು ಶೇ 2.2ರಷ್ಟಿತ್ತು. ಬ್ಯಾಂಕಿಂಗ್‌, ರಿಯಲ್ ಎಸ್ಟೇಟ್‌ ಒಳಗೊಂಡ ಸೇವಾ ವಲಯದ ಪ್ರಗತಿ ಹಿಂದಿನ ವರ್ಷದ ಶೇ 7.2ರಿಂದ ಶೇ 10.2ಕ್ಕೆ ಏರಿಕೆ ಕಂಡಿದೆ. ಕೃಷಿ ವಲಯದ ಪ್ರಗತಿ ತುಸು ಕುಸಿದಿದ್ದು, ಕಳೆದ ವರ್ಷದ ಶೇ 4.1ರಿಂದ ಶೇ 3.5ಕ್ಕೆ ಇಳಿದಿದೆ.

ರುಮ್ಕಿ ಮಜುಂದಾರ್‌ ಅರ್ಥಶಾಸ್ತ್ರಜ್ಞೆ ಡೆಲಾಯ್ಟ್‌ ಇಂಡಿಯಾಜಿಎಸ್‌ಟಿ ಕಡಿತವು ಹಬ್ಬದ ಸಂದರ್ಭದಲ್ಲಿ ಖರೀದಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಿದೆ. ಮೂರನೆಯ ತ್ರೈಮಾಸಿಕದಲ್ಲೂ ಗಣನೀಯ ಪ್ರಗತಿ ನಿರೀಕ್ಷಿಸಬಹುದು ಅದಿತಿ ನಾಯರ್‌ ಮುಖ್ಯ ಅರ್ಥಶಾಸ್ತ್ರಜ್ಞೆ ಇಕ್ರಾಸದ್ಯ ಜಿಡಿಪಿ ದಾಖಲೆ ಮಟ್ಟದಲ್ಲಿರುವುದರಿಂದ ಡಿಸೆಂಬರ್‌ನಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ದರ ಕಡಿತದ ಸಾಧ್ಯತೆಗಳು ಕಡಿಮೆ

ಜಿಡಿಪಿ: ಹೊಸ ದಾಖಲೆ ನಿರೀಕ್ಷೆ

ಜನವರಿಯಲ್ಲಿ ನಡೆದ ಆರ್ಥಿಕ ಸಮೀಕ್ಷೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 6.3ರಿಂದ 6.8ರ ನಡುವೆ ಇರಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಆರ್ಥಿಕ ವರ್ಷದ ಮೊದಲಾರ್ಧದಲ್ಲೇ ಇದು ಶೇ 8ರ ಗಡಿ ದಾಟಿದೆ. ಹೀಗಾಗಿ ಹಣಕಾಸು ವರ್ಷದ ಅಂತ್ಯಕ್ಕೆ ಗುರಿ ಮೀರಿ ಜಿಡಿಪಿ ದಾಖಲಾಗುವ ನಿರೀಕ್ಷೆ ಇದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.8ರಷ್ಟು ಜಿಡಿಪಿ ಅಂದಾಜು ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries