ಖಾನ್ ಯೂನುಸ್: ಕದನವಿರಾಮ ಒಪ್ಪಂದದಂತೆ 15 ಪ್ಯಾಲೆಸ್ಟೀನಿಯನ್ನರ ಮೃತದೇಹಗಳನ್ನು ಇಸ್ರೇಲ್ ಶನಿವಾರ ಹಸ್ತಾಂತರಿಸಿದೆ ಎಂದು ಇಲ್ಲಿನ ನಾಸಿರ್ ಆಸ್ಪತ್ರೆ ಮಾಹಿತಿ ನೀಡಿದೆ. ಒಬ್ಬ ಒತ್ತೆಯಾಳುವಿನ ಮೃತದೇಹದ ಅವಶೇಷಗಳನ್ನು ಹಮಾಸ್‌ನವರು ಶುಕ್ರವಾರ ಹಸ್ತಾಂತರ ಮಾಡಿದ್ದರು.
ಪ್ರತಿ ಒತ್ತೆಯಾಳುವಿಗೆ 15 ಪ್ಯಾಲೆಸ್ಟೀನಿಯನ್ನರನ್ನು ವಾಪಸು ನೀಡುವುದಾಗಿ ಇಸ್ರೇಲ್ ಒಪ್ಪಿಕೊಂಡಿತ್ತು. 'ಶನಿವಾರದವರೆಗೂ ಒಟ್ಟು 300 ಮೃತದೇಹಗಳನ್ನು ಇಸ್ರೇಲ್ ಹಸ್ತಾಂತರಿಸಿದೆ. ಆದರೆ, ಇವುಗಳಲ್ಲಿ 84 ಮೃತದೇಹಗಳ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಬೇಕಾಯಿತು' ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದರು.
ಒಪ್ಪಂದದಂತೆ ಗಾಜಾದ ಒಳಗೆ ಆಹಾರ, ಔಷಧ ಸೇರಿ ನೆರವು ಸಾಮಾಗ್ರಿಗಳು ಹೋಗಬೇಕು. ಆದರೆ, ಈವರೆಗೂ ಇದಕ್ಕೆ ವೇಗ ದೊರಕಿಲ್ಲ. 2 ಲಕ್ಷ ಟನ್‌ನಷ್ಟು ನೆರವು ಸಾಮಾಗ್ರಿಗಳು ಗಾಜಾ ಪ್ರವೇಶಿಸಲು ಸಿದ್ಧವಾಗಿವೆ. ಆದರೆ, ಕೇವಲ 37 ಸಾವಿರ ಟನ್‌ನಷ್ಟು ಆಹಾರ ಸಾಮಾಗ್ರಿಗಳು ಮಾತ್ರ ಗಾಜಾ ಪ್ರವೇಶಿಸಲು ಇಸ್ರೇಲ್ ಅನುಮತಿ ನೀಡಿದೆ.




