ಜಿನೆವಾ: ಮಕ್ಕಳಿಗೆ ಲಸಿಕೆ ಹಾಕಲು ಅಗತ್ಯವಿರುವ ಸಿರಿಂಜ್ ಗಳು, ನವಜಾತ ಶಿಶುಗಳಿಗೆ ಹಾಲು ಕುಡಿಸಲು ಬಳಸುವ ಬಾಟಲಿಗಳು ಸೇರಿದಂತೆ ಅಗತ್ಯದ ವಸ್ತುಗಳು ಗಾಝಾಕ್ಕೆ ಪ್ರವೇಶಿಸುವುದನ್ನು ಇಸ್ರೇಲ್ ತಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಕಳವಳ ವ್ಯಕ್ತಪಡಿಸಿದೆ.
ಯುದ್ಧದಿಂದ ಜರ್ಜರಿತಗೊಂಡ ಪ್ರದೇಶದಲ್ಲಿ ಅಗತ್ಯವಿರುವವರಿಗೆ ನೆರವುಗಳು ತಲುಪುವುದಕ್ಕೆ ಇಸ್ರೇಲ್ ತಡೆಯೊಡ್ಡಿದೆ. ಗಾಝಾದಲ್ಲಿ ಅಸ್ಥಿರ ಕದನ ವಿರಾಮ ಜಾರಿಯಲ್ಲಿರುವಂತೆಯೇ ಯುನಿಸೆಫ್ ಮಕ್ಕಳ ಸಾಮೂಹಿಕ ಲಸಿಕಾ ಅಭಿಯಾನ ಕೈಗೊಂಡಿದೆ. ಆದರೆ 16 ಲಕ್ಷ ಸಿರಿಂಜ್ ಗಳು ಹಾಗೂ ಲಸಿಕೆ ಬಾಟಲಿಗಳನ್ನು ಸಂಗ್ರಹಿಸಲು ಅಗತ್ಯವಿರುವ ಸೌರಶಕ್ತಿ ಚಾಲಿತ ಫ್ರಿಜ್ ಗಳನ್ನು ಗಾಝಾಕ್ಕೆ ಸಾಗಿಸುವುದಕ್ಕೆ ಗಂಭೀರ ಸವಾಲು ಎದುರಾಗಿದೆ. ಸಿರಿಂಜ್ ಗಳು ಕಸ್ಟಮ್ಸ್ ಕ್ಲಿಯರೆನ್ಸ್ಗಾಗಿ ಆಗಸ್ಟ್ನಿಂದ ಕಾಯುತ್ತಿವೆ . ಸಿರಿಂಜ್ ಗಳು ಹಾಗೂ ರೆಫ್ರಿಜರೇಟರ್ಗಳನ್ನು ಇಸ್ರೇಲ್ ದ್ವಿ-ಬಳಕೆ ಎಂದು ಪರಿಗಣಿಸುತ್ತಿರುವುದರಿಂದ ಈ ವಸ್ತುಗಳು ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ತಪಾಸಣೆಯ ಹಂತವನ್ನು ದಾಟಲು ತೊಡಕಾಗಿದೆ. ಆದರೆ ಇವು ಅತ್ಯಂತ ತುರ್ತು ಅಗತ್ಯದ ವಸ್ತುಗಳಾಗಿವೆ ಎಂದು ಯುನಿಸೆಫ್ನ ವಕ್ತಾರ ರಿಕಾರ್ಡೊ ಪಿರೆಸ್ ಹೇಳಿದ್ದಾರೆ.
ದ್ವಿ-ಬಳಕೆ ವಸ್ತುಗಳು ಎಂದರೆ ಮಿಲಿಟರಿ ಮತ್ತು ನಾಗರಿಕರ ಬಳಕೆಗೆ ಲಭಿಸುವ ವಸ್ತುಗಳು ಎಂದು ಇಸ್ರೇಲ್ ಪರಿಗಣಿಸುತ್ತದೆ. ಹಮಾಸ್ ಮಾನವೀಯ ನೆರವಿನ ಪೂರೈಕೆಗಳನ್ನು ಲೂಟಿ ಮಾಡುತ್ತಿರುವುದರಿಂದ ಆಹಾರ, ನೀರು, ವೈದ್ಯಕೀಯ ಸರಬರಾಜು ಹಾಗೂ ಡೇರೆ ಮತ್ತಿತರ ವಸ್ತುಗಳು ಸೀಮಿತ ಪ್ರಮಾಣದಲ್ಲಿ ಗಾಝಾಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತಿರುವುದಾಗಿ ಗಾಝಾಕ್ಕೆ ನೆರವು ಪೂರೈಕೆಯ ಮೇಲುಸ್ತುವಾರಿ ವಹಿಸಿರುವ ಇಸ್ರೇಲ್ ಮಿಲಿಟರಿಯ ವಿಭಾಗ `ಕೊಗ್ಯಾಟ್' ಹೇಳಿದೆ.
ಗಾಝಾದಲ್ಲಿ ಎರಡು ವರ್ಷಗಳ ಯುದ್ಧದ ಹಿನ್ನೆಲೆಯಲ್ಲಿ ಪೋಲಿಯೊ, ದಡಾರ ಮತ್ತು ನ್ಯುಮೋನಿಯಾದ ವಿರುದ್ಧದ ವಾಡಿಕೆಯ ಲಸಿಕೆಗಳಿಂದ ವಂಚಿತರಾಗಿರುವ ಗಾಝಾದ 40,000ಕ್ಕೂ ಅಧಿಕ ಮಕ್ಕಳಿಗೆ(3 ವರ್ಷದೊಳಗಿನವರು) ಲಸಿಕೆ ಹಾಕುವ ಮೂರು ಹಂತದ ಕಾರ್ಯಕ್ರಮಕ್ಕೆ ಯುನಿಸೆಫ್ ರವಿವಾರ ಚಾಲನೆ ನೀಡಿದೆ.
ಪ್ರಥಮ ದಿನದ ಅಭಿಯಾನದಲ್ಲಿ 2,400 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ್ದು ಇನ್ನೂ ಎರಡು ಸುತ್ತಿನ ಪ್ರಕ್ರಿಯೆ ಬಾಕಿಯಿರುವುದರಿಂದ ಇನ್ನಷ್ಟು ಲಸಿಕೆ, ಸಿರಿಂಜ್ ಗಳ ತುರ್ತು ಅಗತ್ಯವಿದೆ. ಕೆಲ ದಿನಗಳಿಂದ ಗಾಝಾಕ್ಕೆ ಹೆಚ್ಚಿನ ಮಾನವೀಯ ನೆರವು ಪೂರೈಕೆಯಾಗುತ್ತಿದ್ದರೂ ನೀರು ಪೂರೈಸುವ ಟ್ರಕ್ಗಳ ಬಿಡಿಭಾಗ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಗತ್ಯವಿರುವ ಸಿದ್ಧ ಆಹಾರ ಪೂರೈಸುವ 9,38,000 ಬಾಟಲಿಗಳು ಸೇರಿದಂತೆ ಕೆಲವು ನಿರ್ಣಾಯಕ ವಸ್ತುಗಳ ಪ್ರವೇಶವನ್ನು ಇಸ್ರೇಲಿ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಜಿನೆವಾದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಪಿರೆಸ್ ಹೇಳಿದ್ದಾರೆ.
ಅಕ್ಟೋಬರ್ 10ರಂದು ಜಾರಿಗೆ ಬಂದಿರುವ ಕದನ ವಿರಾಮ ಒಪ್ಪಂದವು ಗಾಝಾ ಪ್ರದೇಶದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೆರವು ಪೂರೈಸುವ ಅಂಶವನ್ನು ಒಳಗೊಂಡಿದೆ. ಆದರೆ ಸ್ಥಳಾಂತರಗೊಂಡಿರುವ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಸುಮಾರು 2 ದಶಲಕ್ಷ ಜನರಿಗೆ ಅಗತ್ಯವಿರುವ ನೆರವು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ ಎಂದು ನೆರವು ಪೂರೈಸುವ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.




