ಜೆರುಸಲೆಂ: ಭಾರತದ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಕಾರು ಸ್ಫೋಟ ಘಟನೆಯನ್ನು ಖಂಡಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 'ನಮ್ಮ ನಗರಗಳ ಮೇಲೆ ಉಗ್ರರು ದಾಳಿ ಮಾಡಿ ನಾಶಗೊಳಿಸಬಹುದು ಆದರೆ, ಆತ್ಮಶಕ್ತಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ' ಎಂದಿದ್ದಾರೆ.
ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆಯ ಬಳಿ ಚಲಿಸುತ್ತಿದ್ದ ಕಾರು ಸ್ಫೋಟಗೊಂಡು 12 ಜನ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.
ಈ ಘಟನೆಯನ್ನು ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನೆತನ್ಯಾಹು, 'ಆತ್ಮೀಯ ಸ್ನೇಹಿತ ನರೇಂದ್ರ ಮೋದಿ ಮತ್ತು ಭಾರತದ ಧೈರ್ಯವಂತ ನಾಗರಿಕರೆ, ಸಾರಾ, ನಾನು ಮತ್ತು ಇಡೀ ಇಸ್ರೇಲ್ ಜನತೆ ಸ್ಫೋಟದಲ್ಲಿ ಮೃತರಾದ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ. ಈ ಸಮಯದಲ್ಲಿ ಭಾರತದೊಂದಿಗೆ ಇಸ್ರೇಲ್ ದೃಢವಾಗಿ ನಿಲ್ಲಲಿದೆ' ಎಂದು ಬರೆದುಕೊಂಡಿದ್ದಾರೆ.
'ಭಾರತ ಮತ್ತು ಇಸ್ರೇಲ್ ಶಾಶ್ವತ ಸತ್ಯಗಳ ಮೇಲೆ ನಿಂತಿರುವ ಪ್ರಾಚೀನ ನಾಗರಿಕತೆಯನ್ನು ಒಳಗೊಂಡಿದೆ. ಉಗ್ರರು ನಮ್ಮ ನಗರಗಳ ಮೇಲೆ ದಾಳಿ ನಡೆಸಬಹುದು ಆದರೆ ಆತ್ಮಶಕ್ತಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ರಾಷ್ಟ್ರಗಳ ಬೆಳಕು ನಮ್ಮ ಶತ್ರುಗಳ ಕತ್ತಲೆಯನ್ನು ಮೀರಿಸುತ್ತದೆ' ಎಂದು ಬಣ್ಣಿಸಿದ್ದಾರೆ.




