ಲಕ್ನೊ: ಶ್ರೀರಾಮನ ಬಗ್ಗೆ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಡಿಸೆಂಬರ್ 18ರಂದು ಹಾಜರಾಗುವಂತೆ ವಾರಣಾಸಿ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶುಕ್ರವಾರ ಸೂಚಿಸಿದೆ.
ಈ ಪ್ರಕರಣವನ್ನು ವಿಶೇಷ ನ್ಯಾಯಾಧೀಶ (ಎಂಪಿ-ಎಂಎಲ್‌ಎ) ಯುಜುರ್ವೇದ್ ವಿಕ್ರಮ್ ಸಿಂಗ್ ಅವರ ನ್ಯಾಯಾಲಯದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು.
ಆದರೆ, ರಾಹುಲ್ ಗಾಂಧಿ ಅವರ ಗೈರು ಹಾಜರಿನ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಯಿತು.
ಶ್ರೀರಾಮನ ಕುರಿತ ರಾಹುಲ್ ಗಾಂಧಿ ಹೇಳಿಕೆ ಹಿನ್ನೆಲೆಯಲ್ಲಿ ನ್ಯಾಯವಾದಿ ಹರಿಕೃಷ್ಣ ಪಾಂಡೆ ಅವರು ಈ ವರ್ಷ ಮೇ 12ರಂದು ವಾರಣಾಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಪಾಂಡೆ ಅವರು ಎಪ್ರಿಲ್ 21ರಂದು ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನದ ಸಂದರ್ಭ ರಾಹುಲ್ ಗಾಂಧಿ ಅವರು ಶ್ರೀರಾಮ ಪೌರಾಣಿಕ ವ್ಯಕ್ತಿ. ಆಗಿನ ಕಥೆಗಳು ಕಾಲ್ಪನಿಕ ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಿದ್ದರು.
ಪಾಂಡೆ ಅವರ ಈ ಅರ್ಜಿಯನ್ನು ವಾರಣಾಸಿ ನ್ಯಾಯಾಲಯ ವಜಾಗೊಳಿಸಿತ್ತು. ಅನಂತರ ಪಾಂಡೆ ಅವರು ಸೆಪ್ಟಂಬರ್ 26ರಂದು ಅದೇ ನ್ಯಾಯಾಲಯದಲ್ಲಿ ಪುನರ್ ಪರೀಶೀಲನಾ ಅರ್ಜಿ ಸಲ್ಲಿಸಿದ್ದರು.




