ಹೊಸದಿಲ್ಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 90,225ಕ್ಕೆ ತಲುಪಿದೆ ಎಂದು ಹೇಳಿದ್ದಾರೆ.
ದೇಶದ ಇತಿಹಾಸದಲ್ಲೇ ಸುಪ್ರೀಂ ಕೋರ್ಟ್ ನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಪ್ರಕರಣಗಳು ಬಾಕಿ ಇರುವ ಕುರಿತು ನಾನು ಯಾರನ್ನೂ ದೂಷಿಸಲು ಹೋಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.
"ನಾನು ಇದಕ್ಕೆ ಯಾರನ್ನೂ ತಪ್ಪಿತಸ್ಥರು ಎಂದು ಹೊಣೆಗಾರರನ್ನಾಗಿಸುವುದಿಲ್ಲ. ಅದು ಅಪ್ರಸ್ತುತವಾಗಿದೆ" ಎಂದು ಮಾಧ್ಯಾಮಗಳೊಂದಿಗೆ ನಡೆದ ಅನೌಪಚಾರಿಕ ಸಂವಾದದಲ್ಲಿ ಅವರು ಹೇಳಿದ್ದಾರೆ. ನವೆಂಬರ್ 24ರಂದು ಅವರು ಸುಪ್ರೀಂ ಕೋರ್ಟ್ ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಾಕಿ ಇರುವ ಭಾರಿ ಸಂಖ್ಯೆಯ ಪ್ರಕರಣಗಳನ್ನು ವಿಲೇವಾರಿ ಮಾಡಲು ಅಧ್ಯಯನಶೀಲ ಮತ್ತು ಪ್ರಯೋಗಶೀಲ ಧೋರಣೆಯನ್ನು ಅಳವಡಿಸಿಕೊಳ್ಳುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಬಾಕಿ ಇರುವ ಪ್ರಮುಖ ಕಾನೂನು ಪ್ರಶ್ನೆಗಳನ್ನು ಹೊಂದಿರುವ ಮಹತ್ವದ ಪ್ರಕರಣಗಳನ್ನು ಗುರುತಿಸುವುದು ಈ ಕ್ರಮಗಳ ಪೈಕಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.




