ಕೋಟಾ : ರಾಜಸ್ಥಾನ ಪೊಲೀಸರು ಇಬ್ಬರು ಕ್ರೈಸ್ತ ಮಿಷನರಿಗಳ ವಿರುದ್ಧ ಹೊಸದಾಗಿ ಜಾರಿಗೆ ಬಂದಿರುವ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಮೊದಲ ಪ್ರಕರಣವನ್ನು ದಾಖಲಿಸಿದ್ದಾರೆ.
ನವೆಂಬರ್ 4 ರಿಂದ 6ರವರೆಗೆ ಕೋಟಾದ ಬೀರ್ಶೆಬಾ ಚರ್ಚ್‌ನಲ್ಲಿ 'ಆಧ್ಯಾತ್ಮಿಕ ಸತ್ಸಂಗ' ಕಾರ್ಯಕ್ರಮ ನಡೆದಿತ್ತು.
ಕಾರ್ಯಕ್ರದಮಲ್ಲಿ ಆಮಿಷದ ಮೂಲಕ ಮತಾಂತರ ನಡೆಸಿದ್ದಾರೆ ಎಂದು ಕ್ರೈಸ್ತ ಮಿಷನರಿಗಳ ವಿರುದ್ಧ ಆರೋಪಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸ್ಥಳೀಯ ಪದಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಈ ಕುರಿತು ನವೆಂಬರ್ 20ರಂದು ರಾತ್ರಿ ಎಫ್‌ಐಆರ್ ದಾಖಲಾಗಿದೆ. ಕ್ರೈಸ್ತ ಮಿಷನರಿಗಳಾದ ದಿಲ್ಲಿಯ ಚಾಂಡಿ ವರ್ಗೀಸ್, ಕೋಟಾದ ಅರುಣ್ ಜಾನ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಇಬ್ಬರು ಕ್ರೈಸ್ತ ಮಿಷನರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 299 ಮತ್ತು ರಾಜಸ್ಥಾನ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ- 2025ರ ಸೆಕ್ಷನ್ 3 ಮತ್ತು 5ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬೋರ್ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಿಗಳು ಹಿಂದೂ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ರಾಜಸ್ಥಾನ ಸರಕಾರವನ್ನು ದೆವ್ವದ ರಾಜ್ಯ ಎಂದು ಬಣ್ಣಿಸಿದ್ದಾರೆ. ಮತಾಂತರಕ್ಕೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರ್ಯಕ್ರಮದಲ್ಲಿನ ಭಾಷಣಗಳು ಮತ್ತು ಚಟುವಟಿಕೆಗಳ ಕುರಿತ ವೀಡಿಯೊಗಳ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಸಾಮಾಜಿಕ ಮಾಧ್ಯಮ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುವುದು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೇಳಿಕೆಗಳನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನನಗೆ ಮತ್ತು ವರ್ಗೀಸ್ ಅವರಿಗೆ ಮೂರು ದಿನಗಳ ಒಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದ್ದಾರೆ ಎಂದು ಕ್ರೈಸ್ತ ಮಿಷನರಿ ಅರುಣ್ ಜಾನ್ ತಿಳಿಸಿದ್ದಾರೆ. ನಾವು ಮುಚ್ಚಿಡುವಂತದ್ದು ಏನೂ ಇಲ್ಲ. ಕಾರ್ಯಕ್ರಮದ ವೀಡಿಯೊಗಳು ಈಗಾಗಲೇ ವೈರಲ್ ಆಗಿದೆ. ಸಭೆಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆದಿಲ್ಲ ಎಂದು ಅರುಣ್ ಜಾನ್ ಹೇಳಿದ್ದಾರೆ.




