ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಕೆ.ಅಣ್ಣಾಮಲೈ, ತಮಿಳುನಾಡಿನ ಮತಪಟ್ಟಿಯಲ್ಲಿ ಅತ್ಯಧಿಕ ಸಂಖ್ಯೆಯ ನಕಲಿ ಮತದಾರರು ಸೇರ್ಪಡೆಯಾಗಿದ್ದು, ಅವರನ್ನೆಲ್ಲ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ 2.0 ಮೂಲಕ ತುರ್ತಾಗಿ ತೆಗೆದು ಹಾಕಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಶನಿವಾರ ತಿರುಚ್ಚಿ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳು ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕುರಿತು ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ತಮಿಳುನಾಡಿನಲ್ಲಿ ನಡೆಸಲು ಉದ್ದೇಶಿಸಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕುರಿತು ಪ್ರಸ್ತಾಪಿಸಿದ ಅಣ್ಣಾಮಲೈ, "ಬಿಹಾರದಲ್ಲಿ ಶೇ. 6.49ರಷ್ಟು ನಕಲಿ ಮತದಾರರನ್ನು ತೆಗೆದು ಹಾಕಲಾಗಿದೆ" ಎಂದು ಹೇಳಿದ್ದಾರೆ.
"ತಮಿಳುನಾಡಿನಲ್ಲಿ ಅತ್ಯಧಿಕ ಪ್ರಮಾಣದ ನಕಲಿ ಮತದಾರರಿದ್ದಾರೆ. ಡಿಎಂಕೆಯನ್ನು ಬೆಂಬಲಿಸುತ್ತಿರುವ ಕಂದಾಯಾಧಿಕಾರಿಗಳೇ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುತ್ತಿರುವುದು. ಈ ಸಂಬಂಧ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಲು ಡಿಎಂಕೆ ಸರಕಾರ ನಿರಾಕರಿಸುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.
"ಅರ್ಜಿಗಳನ್ನು ಭರ್ತಿ ಮಾಡುವಲ್ಲಿ ಬಿಜೆಪಿಯ ಎರಡನೆ ಹಂತದ ಮತಗಟ್ಟೆ ಏಜೆಂಟ್ ಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜನರು ಬಿಜೆಪಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಅರ್ಜಿಗಳನ್ನು ಭರ್ತಿ ಮಾಡಿ, ಶೀಘ್ರವಾಗಿ ಸಲ್ಲಿಸಬೇಕಿದೆ. ಇದಕ್ಕೆ ಡಿಸೆಂಬರ್ 4 ಅಂತಿಮ ಗಡುವಾಗಿದೆ. ಇದನ್ನು ಸಾಮುದಾಯಿಕ ಸೇವೆಯನ್ನಾಗಿ ಮಾಡಬೇಕು ಎಂದು ರಾಷ್ಟ್ರೀಯ ನಾಯಕರು ಹೇಳಿದ್ದು, ಬಿಜೆಪಿಯ ಕಾರ್ಯಕರ್ತರು ಇದನ್ನು ದಕ್ಷವಾಗಿ ನಡೆಸುತ್ತಿದ್ದಾರೆ" ಎಂದೂ ಅವರು ಪ್ರಶಂಸಿಸಿದ್ದಾರೆ.
ಬಿಹಾರದಲ್ಲಿ ಪ್ರಥಮ ಹಂತದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನ ನಡೆಸಿದ ಬಳಿಕ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಚುನಾವಣಾ ರಾಜ್ಯಗಳಾದ ಒಟ್ಟು ಒಂಬತ್ತು ರಾಜ್ಯಗಳಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಇನ್ನು ಹಲವು ವಿರೋಧ ಪಕ್ಷಗಳ ಆಡಳಿತಾರೂಢ ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.




