ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ದೆಹಲಿ ಪೊಲೀಸರು ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ದೆಹಲಿ ಅಪರಾಧ ವಿಭಾಗದ ತಂಡವು ಇಂದು ಅಲ್-ಫಲಾಹ್ ವಿಶ್ವವಿದ್ಯಾಲಯದ ಕಚೇರಿಗೆ ಭೇಟಿ ನೀಡಿತ್ತು.
ಪರಿಶೀಲನೆ ಬಳಿಕ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಕೋರಿ ವಿಶ್ವವಿದ್ಯಾಲಯಕ್ಕೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ನಿಯಮಗಳನ್ನು ಉಲ್ಲಂಘಿಸಿ ಗಂಭೀರ ಅಕ್ರಮಗಳನ್ನು ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ವಿರುದ್ಧ ವಂಚನೆ ಮತ್ತು ನಕಲಿ ವಿಭಾಗಗಳ ಅಡಿಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 10ರಂದು (ಸೋಮವಾರ) ಕೆಂಪುಕೋಟೆಯ ಬಳಿ ಬಿಳಿ ಬಣ್ಣದ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿ 13 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ದೆಹಲಿ ಸ್ಫೋಟದ ಬಳಿಕ ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಹಲವು ವೈದ್ಯರ ಬಂಧನ ಮತ್ತು 2,900 ಕೆ.ಜಿ. ಸ್ಫೋಟಕಗಳನ್ನು ವಶಕ್ಕೆ ಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.




