ಲಖನೌ: 'ವೈಟ್ ಕಾಲರ್ ಭಯೋತ್ಪಾದನೆ ಮಾದರಿ'ಯ ಸದಸ್ಯೆ ಎಂಬ ಶಂಕೆಯ ಮೇಲೆ ಬಂಧನದಲ್ಲಿರುವ ವೈದ್ಯೆ ಶಾಹೀನ್ ಸಯೀದ್ ಪಾಕಿಸ್ತಾನದ ಸೇನಾ ವೈದ್ಯರೊಂದಿಗೆ ಸಂಪರ್ಕ ಹೊಂದಿದ್ದಳು ಮತ್ತು ದೇಶದ ವಿವಿಧೆಡೆ ಬಾಂಬ್ ದಾಳಿ ನಡೆಸಿ ವಿದೇಶಕ್ಕೆ ಪಲಾಯನ ಮಾಡುವ ಯೋಜನೆ ಹೊಂದಿದ್ದಳು.
ಶಾಹೀನ್ ಸಹೋದರ ಡಾ.ಪರ್ವೇಜ್ ಅಹ್ಮದ್‌ನನ್ನೂ ಇದೇ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಶಾಹೀನ್, ಉತ್ತರ ಪ್ರದೇಶದಲ್ಲಿ ಕೆಲಸ ಮಾಡುವ ಜಮ್ಮು ಮತ್ತು ಕಾಶ್ಮೀರದ 10ಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳನ್ನು ತನ್ನ ಜಾಲಕ್ಕೆ ಸೆಳೆಯಲು ಯತ್ನಿಸಿದ್ದಳು ಎಂದು ಮೂಲಗಳು ತಿಳಿಸಿವೆ.
ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಸಹೋದರಿ ಸಹೀದಾ ಅಜರ್ ಜತೆ ಶಾಹೀನ್ ಸಂಪರ್ಕ ಹೊಂದಿದ್ದಳು. ಸಹೀದಾ ನಿರ್ದೇಶನದಂತೆ ಭಯೋತ್ಪಾದನೆ ಸಂಘಟನೆಯ ಮಹಿಳಾ ಘಟಕ ಸ್ಥಾಪಿಸುವ ಮತ್ತು ಅದರ ಜಾಲವನ್ನು ಕೆಲ ದೇಶಗಳಿಗೂ ವಿಸ್ತರಿಸುವ ಯೋಜನೆ ಹೊಂದಿದ್ದಳು ಎಂದು ತಿಳಿಸಿವೆ.
ಶಾಹೀನ್ ಬಳಸುತ್ತಿದ್ದ ಮೊಬೈಲ್ ಫೋನ್‌ನಲ್ಲಿದ್ದ ಸಿಮ್ ಕಾರ್ಡ್ ಅನ್ನು ಪಡೆಯಲು ನಕಲಿ ವಿಳಾಸ ನೀಡಲಾಗಿದೆ. ಸಿಮ್ ಪಡೆಯಲು ಫರೀದಾಬಾದ್ ಜಿಲ್ಲೆಯ ಮಸೀದಿಯ ವಿಳಾಸ ನೀಡಲಾಗಿದೆ. ಶಾಹೀನ್, ಥಾಯ್ಲೆಂಡ್‌ಗೂ ಪ್ರವಾಸ ಮಾಡಿ ಬಂದ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿವೆ.
ಕಳೆದ ನಾಲ್ಕು ವರ್ಷಗಳಿಂದ ವೈಟ್ ಕಾಲರ್ ಭಯೋತ್ಪಾದನಾ ಮಾದರಿ ಸಕ್ರಿಯಗೊಂಡಿದ್ದು, ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳು ಮತ್ತು ರಾಷ್ಟ್ರ ರಾಜಧಾನಿಯೇ ಅದರ ಗುರಿಯಾಗಿತ್ತು.




