ಪಾಟ್ನಾ: 'ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶನಿವಾರ ಭೇಟಿಯಾಗಿರುವ ನಮ್ಮ ಪಕ್ಷದ (ಎಲ್‌ಜೆಪಿ-ರಾಮ್ ವಿಲಾಸ್) ಪ್ರತಿನಿಧಿಗಳು ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಯ ಅಭೂತಪೂರ್ವ ಗೆಲುವಿಗಾಗಿ ಅಭಿನಂದನೆ ಸಲ್ಲಿಸಿದರು ಮತ್ತು ಮುಂದಿನ ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಿದರು' ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತಿಳಿಸಿದರು.
ನಮ್ಮ ಪಕ್ಷ ಮತ್ತು ನಿತೀಶ್ ಅವರ ಜೆಡಿಯು ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಆರ್‌ಜೆಡಿ ಮತ್ತು ಕಾಂಗ್ರೆಸ್ ಸುಳ್ಳು ನಿರೂಪಣೆ ಸೃಷ್ಟಿಸಿದ್ದವು' ಎಂದು ಅವರು ಅವರು ಟೀಕಿಸಿದರು.
'ಬಿಹಾರ ವಿಧಾನಸಭೆಯಲ್ಲಿ ಒಬ್ಬರೂ ಶಾಸಕರನ್ನು ಹೊಂದಿಲ್ಲದ ಎಲ್‌ಜೆಪಿ (ಆರ್‌ವಿ) ಮೇಲೆ ನಂಬಿಕೆಯಿಟ್ಟು, ಸೀಟು ಹಂಚಿಕೆ ಮಾಡಿದ್ದಕ್ಕೆ ಎನ್‌ಡಿಎ ಮತ್ತು ಕೇಂದ್ರದ ನಾಯಕತ್ವಕ್ಕೆ ಕೃತಜ್ಞನಾಗಿದ್ದೇನೆ' ಎಂದು ಅವರು ಹೇಳಿದರು.
ರಾಜ್ಯದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಲ್‌ಜೆಪಿ (ಆರ್‌ವಿ) 19 ಸ್ಥಾನಗಳಲ್ಲಿ ಜಯ ಸಾಧಿಸಿದೆ.
'2020ರ ಚುನಾವಣೆಯಲ್ಲಿ ಪಕ್ಷದ ತೀವ್ರ ಹಿನ್ನಡೆಗೆ ಅನೇಕರು ಕಾರಣರಾಗಿದ್ದರು. ಆ ಬಳಿಕ ಪಕ್ಷವನ್ನು ಪುನರುಜ್ಜೀವನಗೊಳಿಸಲು ನಾನು ಹೋರಾಡಿದ್ದೇನೆ' ಎಂದು ಅವರು ತಿಳಿಸಿದರು.
ಬಿಹಾರದಲ್ಲಿ ಮಹಾಘಟಬಂಧನ್ ಅನ್ನು ಸೋಲಿಸಿ ಎನ್‌ಡಿಎ ಅಧಿಕಾರಿ ಉಳಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾಡಿದ್ದ ಕಾರ್ಯಗಳು ಎನ್‌ಡಿಎ ಅನ್ನು ಕೈಹಿಡಿದಿವೆ ಎಂದು ಅವರು ಹೇಳಿದರು.
ಶರದ್ ಪವಾರ್
'ಹಣ ವಿತರಣೆಗೆ ಆಯೋಗ ಹೇಗೆ ಅನುಮತಿಸಿತು?'
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಅದ್ವಿತೀಯ ಗೆಲುವಿಗೆ ಮಹಿಳಾ ಉದ್ಯಮಶೀಲತಾ ಯೋಜನೆ ಮಹತ್ವದ ಪಾತ್ರವಹಿಸಿದೆ. ಮಹಿಳೆಯರಿಗೆ ಹಣ ವರ್ಗಾಯಿಸಲು ಚುನಾವಣಾ ಆಯೋಗ ಹೇಗೆ ಅವಕಾಶ ಮಾಡಿಕೊಟ್ಟಿತು' ಎಂದು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಶನಿವಾರ ಪ್ರಶ್ನಿಸಿದರು.
'ಬಿಹಾರದ ಮುಖ್ಯಮಂತ್ರಿ ನಿತೀಶ್ ಅವರು ನುಡಿದ ಭವಿಷ್ಯದಂತೆ ಚುನಾವಣಾ ಫಲಿತಾಂಶ ಬಂದಿದೆ. ಈ ಚುನಾವಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಿದ್ದಾರೆ. ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ₹10000 ಜಮೆ ಮಾಡಿದ ಯೋಜನೆಯು ಎನ್‌ಡಿಎಗೆ ವರದಾನವಾಗಲಿದೆ ಎಂದು ನಾನು ಹಿಂದೆಯೇ ಭಾವಿಸಿದ್ದೆ' ಎಂದು ಅವರು ಬಾರಾಮತಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಹೀಗೆ ಸರ್ಕಾರ ಚುನಾವಣಾ ವೇಳೆಯಲ್ಲಿ ಹಣ ಹಂಚಿದ್ದು ಸರಿಯೇ ಎಂಬುದನ್ನು ಆಯೋಗ ಯೋಚಿಸಬೇಕು. ಭವಿಷ್ಯದ ಚುನಾವಣೆಗಳಲ್ಲೂ ಬಿಹಾರ ಮಾದರಿ ಜಾರಿಯಾದರೆ ಹೇಗಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.




