ದಿಲ್ಲಿ ಮಹಾನಗರ ಪಾಲಿಕೆ ಅಧೀನದ ದಿಲ್ಲಿಯ ಏಕೈಕ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಾಗಿರುವ ಮಹರ್ಷಿ ವಾಲ್ಮೀಕಿ ಸಾಂಕ್ರಾಮಿಕ ರೋಗಗಳ (ಎಂವಿಐಡಿ) ಆಸ್ಪತ್ರೆಯು ಹಂಚಿಕೊಂಡಿರುವ ದಾಖಲೆಗಳ ಪ್ರಕಾರ ಈ ಮೂರು ವರ್ಷಗಳ ಅವಧಿಯಲ್ಲಿ ನಗರದಲ್ಲಿ 18 ಜನರು ರೇಬಿಸ್‌ಗೆ ಬಲಿಯಾಗಿದ್ದಾರೆ.
ಎಂವಿಐಡಿ ಆಸ್ಪತ್ರೆಯಲ್ಲಿ 2022ರಲ್ಲಿ ಆರು, 2023ರಲ್ಲಿ ಎರಡು ಮತ್ತು 2024ರಲ್ಲಿ 10 ಸಾವುಗಳು ಸಂಭವಿಸಿರುವುದನ್ನು ಆರ್‌ಟಿಐ ದತ್ತಾಂಶಗಳು ತೋರಿಸಿವೆ. ಈ ಅಂಕಿಅಂಶಗಳು ಈ ವರ್ಷದ ಪೂರ್ವಾರ್ಧದಲ್ಲಿ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಎಸ್.ಪಿ.ಸಿಂಗ್ ಬಘೇಲ್ ಅವರು ಲೋಕಸಭೆಯಲ್ಲಿ ನೀಡಿದ್ದ ಲಿಖಿತ ಉತ್ತರಕ್ಕೆ ವಿರುದ್ಧವಾಗಿವೆ. ಜನವರಿ 2022ರಿಂದ ಜನವರಿ 2025ರವರೆಗೆ ದಿಲ್ಲಿಯಲ್ಲಿ ರೇಬಿಸ್‌ನಿಂದ ಯಾವುದೇ ವ್ಯಕ್ತಿಯ ಸಾವು ಸಂಭವಿಸಿಲ್ಲ ಎಂದು ಬಘೇಲ್ ತಿಳಿಸಿದ್ದರು.
ಆದಾಗ್ಯೂ ಬಘೇಲ್ ಅವರ ಉತ್ತರವು ಈ ಅವಧಿಯಲ್ಲಿ ದಿಲ್ಲಿಯಲ್ಲಿ ವರದಿಯಾಗಿದ್ದ ನಾಯಿ ಕಡಿತ ಪ್ರಕರಣಗಳ ಡೇಟಾವನ್ನು ಒಳಗೊಂಡಿತ್ತು. 2022ರಲ್ಲಿ 6,691, 2023ರಲ್ಲಿ 17,874 ಮತ್ತು 2025ರಲ್ಲಿ 25,210 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ಯಾವುದೇ ಮಾನವ ಸಾವು ಸಂಭವಿಸಿಲ್ಲ ಎಂದು ಅಧಿಕೃತವಾಗಿ ಹೇಳಲಾಗಿದ್ದರೂ ನಾಯಿ ಕಡಿತ ಘಟನೆಗಳಲ್ಲಿ ವರ್ಷದಿಂದ ವರ್ಷಕ್ಕೆ ಸ್ಥಿರವಾದ ಏರಿಕೆಯನ್ನು ಸೂಚಿಸಿದೆ.
ದಿಲ್ಲಿಯಲ್ಲಿ ರೇಬಿಸ್ ಸಾವುಗಳ ಕುರಿತು ಕೇಂದ್ರ ಮತ್ತು ಸ್ಥಳೀಯ ದತ್ತಾಂಶಗಳ ನಡುವೆ ತೀವ್ರ ವ್ಯತ್ಯಾಸವಿರುವುದು ಆರೋಗ್ಯ ನಿಗಾ ವ್ಯವಸ್ಥೆಗಳು ಮತ್ತು ರೇಬಿಸ್ ವರದಿಗಾರಿಕೆ ಕಾರ್ಯವಿಧಾನಗಳ ನಿಖರತೆಯ ನಡುವೆ ಸಮನ್ವಯ ಕುರಿತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರೇಬಿಸ್ ಶೇ.100ರಷ್ಟು ತಡೆಗಟ್ಟಬಹುದಾದ ಕಾಯಿಲೆಯಾಗಿದ್ದರೂ ಒಮ್ಮೆ ರೋಗಲಕ್ಷಣಗಳು ಕಾಣಿಸಿಕೊಂಡರೆ ಯಾವಾಗಲೂ ಮಾರಣಾಂತಿಕವಾಗಿರುತ್ತದೆ.
ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯಗಳು ನಾಯಿ ಕಡಿತ ಮತ್ತು ರೇಬಿಸ್ ಸಾವುಗಳ ಕುರಿತು ಮಾಸಿಕ ಡೇಟಾವನ್ನು ಸಂಗ್ರಹಿಸಿ ಅದನ್ನು ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಪೋರ್ಟಲ್‌ಗೆ ಅಪ್‌ಲೋಡ್ ಮಾಡುತ್ತವೆ ಎಂದು ಬಘೇಲ್ ಸಂಸತ್ತಿನಲ್ಲಿ ತಿಳಿಸಿದ್ದರು. ಈ ವ್ಯವಸ್ಥೆಯು ದೇಶಾದ್ಯಂತ ರೇಬಿಸ್ ಪ್ರಕರಣಗಳು ಮತ್ತು ಪ್ರಾಣಿ ಕಡಿತ ಘಟನೆಗಳ ಮೇಲೆ ಕಣ್ಗಾವಲನ್ನು ಹೆಚ್ಚಿಸಿದೆ ಎಂದು ಅವರು ಒತ್ತಿ ಹೇಳಿದ್ದರು.
ಬಘೇಲ್ ಅವರಿಂದ ಪ್ರತಿಕ್ರಿಯೆಗಾಗಿ ಸುದ್ದಿಸಂಸ್ಥೆಯು ಪ್ರಯತ್ನಿಸಿತ್ತಾದರೂ ಅವರು ಲಭ್ಯರಾಗಿಲ್ಲ ಮತ್ತು ಟೆಕ್ಸ್ಟ್ ಮೆಸೇಜ್‌ಗಳಿಗೂ ಉತ್ತರಿಸಿಲ್ಲ. ಆದಾಗ್ಯೂ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಹಿಮಾಂಶು ಶರ್ಮಾ ಅವರು ಅಂಕಿಅಂಶಗಳಲ್ಲಿಯ ವ್ಯತ್ಯಾಸಗಳೇನಾದರೂ ಇದ್ದರೆ ಇಲಾಖೆಯಿಂದ ಸೂಕ್ತ ಉತ್ತರವನ್ನು ಪಡೆದುಕೊಳ್ಳದೆ ಆ ಬಗ್ಗೆ ತಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.




