ಮಾಸ್ಕೋ: ಟರ್ಕಿಯ ಇಸ್ತಾಂಬುಲ್ ನಲ್ಲಿ ಉಕ್ರೇನ್ ನೊಂದಿಗೆ ಮಾತುಕತೆ ಮುಂದುವರಿಸಲು ರಶ್ಯ ಸಿದ್ಧವಿದೆ ಎಂದು ರಶ್ಯದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ತಾಸ್ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ.
ಮಾತುಕತೆ ಪುನರಾರಂಭಿಸುವಂತೆ ಟರ್ಕಿಯ ಅಧಿಕಾರಿಗಳು ರಶ್ಯ ಮತ್ತು ಉಕ್ರೇನ್ ಅನ್ನು ಪದೇ ಪದೇ ಒತ್ತಾಯಿಸುತ್ತಿದ್ದಾರೆ.
ರಶ್ಯದ ತಂಡವು ಇದಕ್ಕೆ ಸಿದ್ಧವಿದೆ. ಚೆಂಡು ಈಗ ಉಕ್ರೇನ್ ನ ಅಂಗಣದಲ್ಲಿದೆ ಎಂದು ವಿದೇಶಾಂಗ ಇಲಾಖೆಯ ನಿರ್ದೇಶಕ ಅಲೆಕ್ಸಿ ಪೊಲಿಷುಕ್ ಹೇಳಿದ್ದಾರೆ.
ಆದರೆ ಮಾತುಕತೆ ಸ್ಥಗಿತಗೊಳ್ಳಲು ತಾನು ಹೊಣೆ ಎಂಬ ರಶ್ಯದ ಪ್ರತಿಪಾದನೆಯನ್ನು ಉಕ್ರೇನ್ ತಿರಸ್ಕರಿಸಿದ್ದು ಯಾವುದೇ ಅರ್ಥಪೂರ್ಣ ಮಾತುಕತೆಗೂ ಮುನ್ನ ರಶ್ಯವು ಆಕ್ರಮಿತ ಉಕ್ರೇನಿಯನ್ ಪ್ರದೇಶದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಜುಲೈ 23ರಂದು ರಶ್ಯ ಮತ್ತು ಉಕ್ರೇನ್ ನ ನಿಯೋಗಗಳ ನಡುವೆ ನಡೆದ ಮಾತುಕತೆ ಸಂದರ್ಭ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ನಡುವೆ ನೇರ ಮಾತುಕತೆ ನಡೆಯಬೇಕೆಂದು ಉಕ್ರೇನ್ ಪ್ರಸ್ತಾಪಿಸಿತ್ತು. ಆದರೆ ಮಾಸ್ಕೋದಲ್ಲಿ ಮಾತುಕತೆ ನಡೆಯಬೇಕೆಂಬ ರಶ್ಯದ ಷರತ್ತನ್ನು ಉಕ್ರೇನ್ ತಿರಸ್ಕರಿಸಿತ್ತು.




