ಢಾಕಾ: ಬಾಂಗ್ಲಾದೇಶದಲ್ಲಿ 2024ರ ಜುಲೈ-ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಮೂವರ ವಿರುದ್ಧದ ತೀರ್ಪನ್ನು ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಸೋಮವಾರ ಪ್ರಕಟಿಸಿದೆ.
453 ಪುಟಗಳ ತೀರ್ಪು ಪ್ರಕಟಿಸಿದ ಪೀಠ, ಹಸೀನಾ ವಿದ್ಯಾರ್ಥಿಗಳ ಮೇಲೆ ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಎಸಗಿರುವುದು ಸಾಬೀತಾಗಿದೆ ಎಂದು ಹೇಳಿದೆ.
2024ರ ಜುಲೈ-ಆಗಸ್ಟ್ ಪ್ರತಿಭಟನೆಗಳಲ್ಲಿ 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 24,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು ಎಂದು ತೀರ್ಪು ಉಲ್ಲೇಖಿಸಿದೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು, "ದೇಶದ ಶತ್ರುಗಳು" ಎಂದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಲ್ಲಿ ಹಸೀನಾ ನೇರ ಪಾತ್ರವಹಿಸಿದ್ದರೆಂದು ಪೀಠವು ಹೇಳಿದೆ.
ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ವ್ಯವಸ್ಥಿತವಾಗಿ ಹತ್ತಿಕ್ಕಿದ್ದರು. ಹಲವರ ಮೃತದೇಹಗಳನ್ನು ಸುಟ್ಟು ಹಾಕಿದ್ದರು. ಅದಕ್ಕೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಸಂಚು ರೂಪಿಸಿದ್ದರು ಎಂದು ನ್ಯಾಯಾಲಯವು ಹೇಳಿದೆ.
ಐಸಿಟಿ ನ್ಯಾಯಾಧೀಶರಲ್ಲಿ ಒಬ್ಬರು ತನಿಖಾ ವರದಿ ಉಲ್ಲೇಖಿಸಿ, ಶೇಖ್ ಹಸೀನಾ ಸರ್ಕಾರವು ವೈದ್ಯರಿಗೆ ಒತ್ತಡ ಹಾಕಿ ವಿದ್ಯಾರ್ಥಿ ನಾಯಕ ಅಬು ಸಯೀದ್ ಅವರ ಮರಣೋತ್ತರ ಪರೀಕ್ಷೆ ವರದಿಯನ್ನು ನಾಲ್ಕೈದು ಬಾರಿ ಬದಲಾಯಿಸಿತ್ತು ಎಂದು ತಿಳಿಸಿದ್ದಾರೆ.
ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯಲ್ಲಿ ಹೆಲಿಕಾಪ್ಟರ್‌ಗಳು ಹಾಗೂ ಮಾರಕ ಆಯುಧಗಳ ಬಳಕೆಗೆ ಹಸೀನಾ ನೇರ ಆದೇಶ ನೀಡಿದ್ದಾರೆ ಎಂಬ ಅಂಶ ತೀರ್ಪಿನಲ್ಲಿ ಹೇಳಲಾಗಿದೆ. ಆಗಸ್ಟ್ 5ರಂದು ಢಾಕಾದಲ್ಲಿ ಸೇನೆ ಜನರ ಮೇಲೆ ಗುಂಡು ಹಾರಿಸಿದ ಘಟನೆ, ಗಾಯಗೊಂಡವರಿಗೆ ಚಿಕಿತ್ಸೆಯನ್ನೇ ನಿರಾಕರಿಸಿದ ಆರೋಪ, ಇವೆಲ್ಲವನ್ನು ಪೀಠ ಗಂಭೀರವಾಗಿ ಗಮನಿಸಿದೆ.
ನ್ಯಾಯಾಧೀಶರು ತೀರ್ಪಿನ ಸಮಯದಲ್ಲಿ ಹಸೀನಾ ಮತ್ತು ದಕ್ಷಿಣ ಢಾಕಾ ಮಾಜಿ ಮೇಯರ್ ನಡುವೆ ನಡೆದ ಸಂಭಾಷಣೆಯೊಂದನ್ನೂ ಓದಿ ಕೇಳಿಸಿದ್ದು, ಪ್ರತಿಭಟನೆಯನ್ನು ಕುಗ್ಗಿಸಲು ಬಲಪ್ರಯೋಗ ಮಾಡುವ ಸೂಚನೆ ಹಸೀನಾದಿಂದಲೇ ಬಂದಿತ್ತು ಎಂದು ದೃಢಪಡಿಸಿದ್ದಾರೆ.
ಆಗಿನ ಗೃಹ ಸಚಿವ ಅಸಾದುಝ್ಝಮಾನ್ ಖಾನ್ ಕಮಾಲ್, ಪೊಲೀಸ್ ಮಹಾನಿರ್ದೇಶಕ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಸೇರಿ ಮೂಹಿಕವಾಗಿ ಮಾನವೀಯತೆಯ ವಿರುದ್ಧ ಅಪರಾಧಗಳಲ್ಲಿ ಕೈಜೋಡಿಸಿದ್ದರೆಂದು ಐಸಿಟಿ ಹೇಳಿದೆ. ವಿದ್ಯಾರ್ಥಿಗಳ ಮೇಲಿನ ಹಿಂಸೆ, ಬೆದರಿಕೆ, ಪೊಲೀಸರ ಗುಂಡಿನ ದಾಳಿ ಇವುಗಳಿಗೆ ಸಂಬಂಧಿಸಿದ ವೀಡಿಯೊ ಪುರಾವೆಗಳು ಕೋರ್ಟ್ ದಾಖಲೆಗಳಲ್ಲಿ ಸೇರಿವೆ.
ತೀರ್ಪಿನ ಕೊನೆಯಲ್ಲಿ ಪೀಠ, 2024ರ ರಾಷ್ಟ್ರವ್ಯಾಪಿ ದಂಗೆ ಹಾಗೂ ದೌರ್ಜನ್ಯಗಳ "ಮುಖ್ಯ ಸೂತ್ರಧಾರಿ" ಶೇಖ್ ಹಸೀನಾ ಎಂದೇ ಸ್ಪಷ್ಟವಾಗಿ ಹೇಳಿದೆ. ಅಧಿಕಾರ ಕಾಪಾಡಿಕೊಳ್ಳಲು ಹಿಂಸಾಚಾರ ಮತ್ತು ಬಲಪ್ರಯೋಗಕ್ಕೆ ಅವಲಂಬನೆಯಾದದ್ದೇ ಅವರ ಆಡಳಿತದ ಗುರುತು ಎಂದು ನ್ಯಾಯಮಂಡಳಿ ತೀವ್ರ ಟೀಕೆ ಮಾಡಿದೆ.




