HEALTH TIPS

ಮಾದಕ ವಸ್ತು- ಭಯೋತ್ಪಾದನೆ ಜಾಲದ ವಿರುದ್ಧ ಜಾಗತಿಕ ಕ್ರಮ: ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಆಗ್ರಹ

ಜೋಹಾನ್ಸ್ ಬರ್ಗ್: ಮಾದಕ ವಸ್ತು-ಭಯೋತ್ಪಾದನೆ ಜಾಲವನ್ನು ಎದುರಿಸಲು ಪ್ರತ್ಯೇಕ ಜಿ20 ಉಪಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ. ಫೆಂಟಾನಿಲ್‍ ನಂತಹ ಅಪಾಯಕಾರಿ ಸಂಶ್ಲೇಷಿತ ವಸ್ತುಗಳ ಹರಡುವಿಕೆ ಮತ್ತು ಕಳ್ಳಸಾಗಣೆಯನ್ನು ತಡೆಯುವ ಹಾಗೂ ಭಯೋತ್ಪಾದನೆಯನ್ನು ಉತ್ತೇಜಿಸುವ ಕ್ರಿಮಿನಲ್ ಆರ್ಥಿಕತೆಗಳನ್ನು ತೊಡೆದುಹಾಕುವ ತುರ್ತು ಅಗತ್ಯವನ್ನು ಒತ್ತಿಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿರುವ ನಾಸ್ರೆಕ್ ಎಕ್ಸ್ ಪೋ ಸೆಂಟರ್‍ ನಲ್ಲಿ ಜಿ20 ನಾಯಕರ ಶೃಂಗಸಭೆಯ ಮೊದಲ ದಿನದ ಸಮಗ್ರ ಅಧಿವೇಶನದಲ್ಲಿ ಅವರು ಭಾಗವಹಿಸಿದರು.

ಹೆಚ್ಚು ಶಕ್ತಿಯುತವಾದ ಸಂಶ್ಲೇಷಿತ ಔಷಧಿಗಳ ಜಾಗತಿಕ ಪ್ರಸರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಫೆಂಟಾನಿಲ್‍ನಂತಹ ವಸ್ತುಗಳು ಸಾರ್ವಜನಿಕ ಆರೋಗ್ಯ, ಸಾಮಾಜಿಕ ಸ್ಥಿರತೆ ಮತ್ತು ಪ್ರಪಂಚದಾದ್ಯಂತದ ಭದ್ರತಾ ವ್ಯವಸ್ಥೆಗಳಿಗೆ ತೀವ್ರ ಅಪಾಯವನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿದರು. ಮಾದಕ ವಸ್ತು- ಭಯೋತ್ಪಾದನೆ ಜಾಲವನ್ನು ಎದುರಿಸುವ ಹೊಸ ಜಿ20 ಉಪಕ್ರಮವು ಹಣಕಾಸು, ಆಡಳಿತ ಮತ್ತು ಭದ್ರತಾ ಚೌಕಟ್ಟುಗಳ ಸಂಯೋಜನೆಯಾಗಿರಬೇಕು. ಮಾದಕ ವಸ್ತು ಕಳ್ಳಸಾಗಣೆ ಜಾಲವನ್ನು ಕಿತ್ತುಹಾಕುವುದು, ಅಕ್ರಮ ಹಣಕಾಸು ಹರಿವುಗಳನ್ನು ಅಡ್ಡಿಪಡಿಸುವುದು ಮತ್ತು ಭಯೋತ್ಪಾದಕ ಗುಂಪುಗಳಿಗೆ ಹಣಕಾಸಿನ ಪ್ರಮುಖ ಮೂಲವನ್ನು ದುರ್ಬಲಗೊಳಿಸುವುದು ಇದರ ಪ್ರಮುಖ ಆದ್ಯತೆಗಳನ್ನು ಒಳಗೊಂಡಿರುತ್ತದೆ. ಮಾದಕ ವಸ್ತು- ಭಯೋತ್ಪಾದನೆ ಜಾಲದ ಸವಾಲನ್ನು ಏಕೀಕೃತ ಜಾಗತಿಕ ಕ್ರಿಯೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ಜಾಗತಿಕ ಅಭಿವೃದ್ಧಿ ಆದ್ಯತೆಗಳನ್ನು ಮರುಪರಿಶೀಲಿಸುವ ವಿಶಾಲ ಮನವಿಯೊಂದಿಗೆ ತಮ್ಮ ಮಾತು ಆರಂಭಿಸಿದ ಮೋದಿ, ಅಂತರ್ಗತ, ಸುಸ್ಥಿರ ಮತ್ತು ನಾಗರಿಕರ ವಿವೇಕದಲ್ಲಿ ನೆಲೆಗೊಂಡಿರುವ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದರು. ಜಿ20 ಜಾಗತಿಕ ಆರೋಗ್ಯರಕ್ಷಕ ಪ್ರತಿಕ್ರಿಯೆ ತಂಡವನ್ನು ಸ್ಥಾಪಿಸಲು ಪ್ರಸ್ತಾಪಿಸಿದ ಅವರು ` ಆರೋಗ್ಯ ತುರ್ತುಪರಿಸ್ಥಿತಿಗಳು ಮತ್ತು ಪ್ರಾಕೃತಿಕ ದುರಂತಗಳ ಎದುರು ಜೊತೆಗೂಡಿ ಕಾರ್ಯ ನಿರ್ವಹಿಸಿದಾಗ ನಾವು ಬಲಿಷ್ಠರಾಗುತ್ತೇವೆ. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ತ್ವರಿತ ನಿಯೋಜನೆಗೆ ಸಿದ್ಧವಾಗಿರುವ ಜಿ20 ಸದಸ್ಯ ರಾಷ್ಟ್ರಗಳಿಂದ ತರಬೇತಿ ಪಡೆದ ವೈದ್ಯಕೀಯ ತಜ್ಞರ ತಂಡವೊಂದರ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

► ಶೃಂಗಸಭೆಯ ಘೋಷಣೆ

ರಾಯ್ಟರ್ಸ್‍ನ ವರದಿಯ ಪ್ರಕಾರ ಜಿ20 ಶೃಂಗಸಭೆಯ ಘೋಷಣೆ `ಜಾಗತಿಕ ಆರ್ಥಿಕತೆಗೆ ಅಸ್ತಿತ್ವದಲ್ಲಿರುವ ಮತ್ತು ಉದ್ಬವಿಸುವ ಅಪಾಯಗಳನ್ನು ಎದುರಿಸಲು ಬಹುಪಕ್ಷೀಯ ಸಹಕಾರವನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದೆ. ಸುಡಾನ್, ಕಾಂಗೋ, ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶ ಮತ್ತು ಉಕ್ರೇನ್‍ ನಲ್ಲಿ ನ್ಯಾಯಯುತ, ಸಮಗ್ರ ಮತ್ತು ಶಾಶ್ವತ ಶಾಂತಿಗಾಗಿ ಕೆಲಸ ಮಾಡುವುದಾಗಿ' ಪ್ರತಿಜ್ಞೆ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries