ವಾಷಿಂಗ್ಟನ್: ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಅಮೆರಿಕಾದ ವಿರುದ್ಧ ನಕಾರಾತ್ಮಕವಾಗಿ ಮಾತನಾಡುವುದನ್ನು ಮುಂದುವರಿಸಿರುವ ಕಾರಣ ಆ ದೇಶದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಳ್ಳುವುದಿಲ್ಲ ಎಂದು ಶ್ವೇತಭವನದ ವಕ್ತಾರೆ ಕ್ಯಾರೊಲಿನ್ ಲೆವಿಟ್ ಹೇಳಿದ್ದಾರೆ.
ಈ ವಾರಾಂತ್ಯದಲ್ಲಿ ಜೊಹಾನ್ಸ್‍ಬರ್ಗ್‍ನಲ್ಲಿ ನಡೆಯುವ ಶೃಂಗಸಭೆಯ ಸಮಾರೋಪದ ಅಧ್ಯಕ್ಷತೆ ಹಸ್ತಾಂತರ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅಮೆರಿಕಾದ ರಾಯಭಾರಿ ಪಾಲ್ಗೊಳ್ಳುತ್ತಾರೆ. ಅಮೆರಿಕಾ ಮತ್ತು ಅದರ ಅಧ್ಯಕ್ಷರ ವಿರುದ್ಧ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಬಳಸುತ್ತಿರುವ ಪದಗಳನ್ನು ನಾವು ಮೆಚ್ಚುವುದಿಲ್ಲ ಎಂದವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಜಿ20 ಶೃಂಗಸಭೆ ಬಹಿಷ್ಕರಿಸುವ ಬಗ್ಗೆ ಅಂತಿಮ ಕ್ಷಣದಲ್ಲಿ ಅಮೆರಿಕಾ ಮರುಚಿಂತನೆ ನಡೆಸುವ ಸೂಚನೆಗಳಿವೆ. ಅಮೆರಿಕಾವು ಜಿ20ಯ ಸ್ಥಾಪಕ ಸದಸ್ಯನಾಗಿದ್ದು ಅವರಿಗೆ ಪಾಲ್ಗೊಳ್ಳುವ ಹಕ್ಕು ಇದೆ. ಅವರು ಪಾಲ್ಗೊಳ್ಳುವುದನ್ನು ನಾವು ಬಯಸುತ್ತೇವೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಗುರುವಾರ ಹೇಳಿಕೆ ನೀಡಿದ್ದರು.




